ಬೆಳಗಾವಿ : ಹಣ ಡಬಲ್ ಮಾಡುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಕಾಕತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಕಾಕ್ ಪಟ್ಟಣದ ಸಿದ್ದನಗೌಡ ಬಿರಾದರ ವಂಚನೆಗೆ ಒಳಗಾದವರು. ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನಿಲ್ ವಿಭೂತಿ, ಸಚಿನ್ ಕುಮಾರ ಅಂಬಲಿ, ಭರತೇಶ್ ಅಗಸರ ಹಾಗೂ ಶಶಿಕುಮಾರ್ ದೊಡ್ಡನವರ ಬಂಧಿತ ಆರೋಪಿಗಳು.
ಬಂಧಿತರಿಂದ ವಂಚನೆ ಕೃತ್ಯಕ್ಕೆ ಬಳಸಿದ ಎರಡು ವಾಹನ ಹಾಗೂ 11 ಲಕ್ಷ ರೂ. ನಗದು ಸೇರಿದಂತೆ 22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿದ್ದನಗೌಡ ಬಿರಾದರ ಅವರು 25 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಡಿ.18 ರಂದು ದೂರು ನೀಡಿದ್ದರು. ಎರಡು ತಿಂಗಳ ಹಿಂದೆ ನಡೆದಿದ್ದ ಈ ಘಟನೆ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿಗಳ ಚಲನವಲನ ಗಮನಿಸಲಾಗಿತ್ತು. ಈ ದೃಶ್ಯಾವಳಿಗಳನ್ನು ಆಧರಿಸಿಯೇ ಪೊಲೀಸರು ಮಾರುವೇಷದಲ್ಲಿ ಹಣ ದ್ವಿಗುಣಗೊಳಿಸಿಕೊಡುವಂತೆ ಹೇಳಿ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುವ ವ್ಯಕ್ತಿಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಆರೋಪಿ ದೀಪಾ ಅವಟಗಿ ಸಲುಗೆಯಿಂದ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಮರಳು ಮಾಡಿ, ಫೋನ್ ನಂಬರ್ ಪಡೆದುಕೊಂಡು ಸಂಪರ್ಕ ಬೆಳೆಸುತ್ತಿದ್ದರು. ನಂತರ ಆ ವ್ಯಕ್ತಿಗಳಿಗೆ ಕರೆ ಮಾಡಿ ನಮ್ಮ ಪರಿಚಯಿಸ್ಥರೊಬ್ಬರು ಆರ್.ಬಿ.ಐ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ಅವರು ಸದ್ಯದಲ್ಲಿಯೇ ನಿವೃತ್ತಿ ಹೊಂದಲಿದ್ದಾರೆ. ಅವರಿಂದ ನಿಮಗೆ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ನಂಬಿಸುತ್ತಿದ್ದಳು. ಹೀಗೆ ಆಸೆಗೆ ಬಿದ್ದವರು, ಹಣ ನೀಡುತ್ತಿದ್ದಂತೆ ನಕಲಿ ಪೊಲೀಸರು ಆಗಮಿಸಿ ಈ ಗ್ಯಾಂಗ್ ಬಂಧಿಸಿದಂತೆ ನಾಟಕವಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಗೋಕಾಕ್ನ ಸಿದ್ದನಗೌಡ ಬಿರಾದರ ಅವರಿಂದ ಹಣ ಪಡೆಯುವಾಗಿನ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಅವುಗಳ ಆಧಾರದ ಮೇಲೆ ಕಾಕತಿ ಪೊಲೀಸರು ಮಾರುವೇಷದಲ್ಲಿ ಹೋಗಿ ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರತ್ಯೇಕ ಪ್ರಕರಣ: ಷೇರು ಮಾರುಕಟ್ಟೆಯಲ್ಲಿ 20 ತಿಂಗಳ ಅಂತರದಲ್ಲಿ ಹೂಡಿದ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಹಂತ ಹಂತವಾಗಿ 1 ಕೋಟಿಗಿಂತ ಹೆಚ್ಚು ಹಣ ಪಡೆದು ಅರ್ಚಕನಿಗೆ ವಂಚಿಸಿರುವ ಘಟನೆ ಇದೇ ವರ್ಷದ ಜುಲೈ ತಿಂಗಳಲ್ಲಿ ನಡೆದಿತ್ತು. ಈ ಸಂಬಂಧ ಆರೋಪಿಯನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ಹಣ ಡಬಲ್ ಮಾಡಿಕೊಡುವುದಾಗಿ ಭರವಸೆ.. ಅರ್ಚಕನಿಗೆ ಕೋಟಿ ರೂಪಾಯಿ ಟೋಪಿ ಹಾಕಿದ ಆರೋಪಿ