ಬೆಳಗಾವಿ: ಲಕ್ಷಣರಹಿತ ಕೋವಿಡ್ ಸೋಂಕಿತರಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಒದಗಿಸುವಂತಹ 25 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಶಾಸಕರಾದ ಅಭಯ್ ಪಾಟೀಲ ಹಾಗೂ ಅನಿಲ್ ಬೆನಕೆ ಸ್ವಂತ ಖರ್ಚಿನಲ್ಲಿ ಖರೀದಿಸಿ ಕೋವಿಡ್ ಕೇರ್ ಕೇಂದ್ರಗಳಿಗೆ ನೀಡುವ ತೀರ್ಮಾನ ಕೈಗೊಂಡಿದ್ದಾರೆ.
ಸುಭಾಷ್ ನಗರದಲ್ಲಿ ದೇವರಾಜ್ ಅರಸು ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಮೊದಲ ಹಂತದಲ್ಲಿ 5 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಒದಗಿಸಲಾಗಿದೆ.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದಲ್ಲದೇ ಲಕ್ಷಣರಹಿತ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ತಕ್ಷಣವೇ ಬೆಡ್ ಸಿಗದಿರುವುದನ್ನು ಶಾಸಕರು ಗಮನಿಸಿ, ಸಹಾಯಹಸ್ತ ಚಾಚಿದ್ದಾರೆ.
ಲಕ್ಷಣರಹಿತ ಕೋವಿಡ್ ಸೋಂಕಿತರು, 85 ರಿಂದ 90 ರಷ್ಟು ಸ್ಯಾಚುರೇಷನ್ ಇದ್ದಂತಹ ಸೋಂಕಿತರಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಒದಗಿಸುವ ಮೂಲಕ ಅವರ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ಆಕ್ಸಿಜನ್ ಕಾನ್ಸನ್ಟ್ರೇಟರ್ಗಳು ಉಪಯುಕ್ತವಾಗಲಿವೆ. ಒಂದು ಕಾನ್ಸನ್ಟ್ರೇಟರ್ ಮೂಲಕ ಇಬ್ಬರಿಗೆ ಆಕ್ಸಿಜನ್ ಸೌಲಭ್ಯವನ್ನು ಕಲ್ಪಿಸಬಹುದಾಗಿದೆ.
ಒಟ್ಟು 25 ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ಶಾಸಕರು ಒಪ್ಪಿಗೆ:
ಒಟ್ಟು 25 ಆಕ್ಸಿಜನ್ ಕಾನ್ಸನ್ಟ್ರೇಟರ್ ಖರೀದಿಗೆ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಐದು ಕಾನ್ಸನ್ಟ್ರೇಟರ್ಗಳನ್ನು ನೀಡಿದ್ದು, ಉಳಿದ 20 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಕೋವಿಡ್ ಕೇರ್ ಕೇಂದ್ರಕ್ಕೆ ನೀಡಲಾಗುವುದು ಎಂದು ಉಭಯ ಶಾಸಕರು ತಿಳಿಸಿದ್ದಾರೆ.