ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಸೆ.3ರಂದು ಚುನಾವಣೆ ನಡೆಯಲಿದ್ದು, ಎಂಇಎಸ್ ಪಕ್ಷದಿಂದಲೇ 58 ವಾರ್ಡ್‌ಗಳಿಗೆ ಒಟ್ಟು 468 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಎಂಇಎಸ್‌ಗೆ ಬಂಡಾಯ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರವನ್ನು ಹಿಂತೆಗೆದುಕೊಳ್ಳಲು ಎಂಇಎಸ್ ಮುಖಂಡರು ಸೋಶಿಯಲ್ ಮೀಡಿಯಾಲ್ಲಿ ಪೋಸ್ಟ್ಗಳನ್ನು ಹರಿಬಿಡುತ್ತಿದ್ದಾರೆ.
"ಒಂದು ವಾರ್ಡ್‌ಗೆ ಒಬ್ಬ ಅಭ್ಯರ್ಥಿ ಎಂಬ ಘೋಷ ವಾಕ್ಯದಡಿ ಸ್ಪರ್ಧೆ ನಡೆಯಬೇಕು" ಎಂದು ಎಂಇಎಸ್ ನಾಯಕರು ಮನವಿ ಮಾಡಿದ್ದಾರೆ. ಭಾವನಾತ್ಮಕವಾಗಿ ಮರಾಠಿ ಭಾಷಿಕರನ್ನು ಸೆಳೆಯಲು ಎಂಇಎಸ್ ಕುತಂತ್ರ ನಡೆಸುತ್ತಿದೆ ಎನ್ನಲಾಗಿದೆ. "ಮರಾಠಿ ಭಾಷಿಕರು ಒಗ್ಗೂಡಿ. ಒಂದು ವಾರ್ಡ್‌ಗೆ ಒಬ್ಬರೇ ಸ್ಪರ್ಧೆ ಮಾಡಿ. ಮರಾಠಿಗರ ಮೇಲಿನ ಹಲ್ಲೆಯನ್ನು ಮರಿಬೇಡಿ. ಎಂಇಎಸ್ ಕೋಟೆ ಬಲಪಡಿಸೋಣ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಪ್ರಚಾರ ಮಾಡುತ್ತಿದೆ. ಎಂಇಎಸ್ ಮುಖಂಡ ಶುಭಂ ಶೆಳಕೆ ವಿಡಿಯೋ ಹೇಳಿಕೆ ಸಹ ಬಿಡುಗಡೆ ಮಾಡಲಾಗಿದೆ.
"ಗಡಿ ವಿವಾದ ಹೋರಾಟಕ್ಕೆ ಶಕ್ತಿ ಬರಬೇಕೆಂದರೆ ಬಂಡಾಯ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಿರಿ. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸಬೇಕಿದೆ. ಕನ್ನಡ ಧ್ವಜ ತೆರವುಗೊಳಿಸಲು ಪಾಲಿಕೆಯನ್ನು ಮತ್ತೆ ಎಂಇಎಸ್ ಹಿಡಿತಕ್ಕೆ ಪಡೆಯಬೇಕಿದೆ. ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಎಂಇಎಸ್‌ಗೆ ಹಿನ್ನಡೆ ಆಗಲಿದೆ. ಗಡಿ ವಿವಾದ ಹೋರಾಟಕ್ಕೆ ಶಕ್ತಿ ತುಂಬಲು ಪಾಲಿಕೆ ಚುನಾವಣೆ ಮಹತ್ವದ್ದಾಗಿದೆ. ಮರಾಠಿ ಭಾಷಿಕರು ಒಂದಾಗಿದ್ದರೆ ನಮ್ಮ ಹೋರಾಟದ ಶಕ್ತಿ ಕುಗ್ಗಲಿದೆ. ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಪ್ರದರ್ಶಿಸಿದ ಒಗ್ಗಟ್ಟು ಮತ್ತೊಮ್ಮೆ ತೋರಿಸಬೇಕಿದೆ. ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿ ಇರುವುದರಿಂದ ಗೊಂದಲ ನಿರ್ಮಾಣವಾಗಲಿದೆ" ಎಂದು ಎಂಇಎಸ್ ಮುಖಂಡ ಶುಭಂ ಶೆಳಕೆ ಹೇಳಿದ್ದಾರೆ.