ಅಥಣಿ (ಬೆಳಗಾವಿ): ರಾಜ್ಯದಲ್ಲಿ ಕೊರೊನಾ ಅಬ್ಬರದಿಂದಾಗಿ ಅದರಲ್ಲೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿದ್ದರಿಂದ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅನಗತ್ಯವಾಗಿ ಹೊರಬಂದ ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 260ಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದು, ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 165 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವಾರದ ಹಿಂದೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನೇತೃತ್ವದಲ್ಲಿ ಬೆಳಗಾವಿ ಎಸ್ಪಿ ಜೊತೆಯಾಗಿ ತಾಲೂಕಿನಲ್ಲಿ ಕೊರೊನಾ ಹತೋಟಿ ಸಂಬಂಧ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಿಎಸ್ಐ ಕುಮಾರ್ ಹಾಡ್ಕರ ಅವರಿಗೆ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಕಠಿಣ ತಪಾಸಣೆಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಕಾರ್ಯಪ್ರವೃತ್ತರಾದ ಪೊಲೀಸರು ಅನಗತ್ಯವಾಗಿ ಹೊರಬಂದವರ ವಿರುದ್ಧ ಕ್ರಮ ಜರುಗಿಸಿದ್ದಾರೆ.
ಅಥಣಿ ಹಾಗೂ ಕಾಗವಾಡ ಅವಳಿ ತಾಲೂಕುಗಳಲ್ಲಿ ಈವರೆಗೆ 2,886 ಕೊರೊನಾ ಪ್ರಕರಣಗಳು ದೃಢವಾಗಿದ್ದು, ಇದರಲ್ಲಿ 188 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 2,127 ಸೋಂಕಿತರು ಗುಣಮುಖವಾಗಿದ್ದು. 571 ಸಕ್ರಿಯ ಪ್ರಕರಣಗಳಿವೆ ಎಂದು ಅಥಣಿ ವೈದ್ಯಾಧಿಕಾರಿ ಡಾ. ಬಸನಗೌಡ ಕಾಗೆ ಮಾಹಿತಿ ನೀಡಿದ್ದಾರೆ.
ಓದಿ: ಕಳ್ಳ ದಾರಿಯಲ್ಲಿ ರಾಜ್ಯಕ್ಕೆ ಬರುತ್ತಿರುವ ಜನರು: ಬೆಳಗಾವಿ ಗಡಿ ಭಾಗದಲ್ಲಿ ಹೆಚ್ಚಿದ ಆತಂಕ