ಬೆಳಗಾವಿ : ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನದ ಸಂದರ್ಭದಲ್ಲಿ ಪ್ರದರ್ಶಿಸಲು ಸಿದ್ದರಾಮಯ್ಯರ ಜೀವನದ ವಿವಿಧ 500 ಫೋಟೋಗಳನ್ನು ಬಳಸಿ 3000 ಮೀಟರ್ (3 ಕಿಮೀ) ಉದ್ದದ ಫೋಟೋ ಬಯೋಗ್ರಫಿ ಸಿದ್ಧಪಡಿಸಲಾಗಿದೆ.
ಜಿಲ್ಲೆಯ ಸವದತ್ತಿ ಪಟ್ಟಣದ ಕಾಂಗ್ರೆಸ್ ಮುಖಂಡ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ ಆನಂದ ಚೋಪ್ರಾ ಅಭಿಮಾನಿ ಬಳಗ ಸಿದ್ದರಾಮಯ್ಯ ರಾಜಕೀಯ ಜೀವನದ ಫೋಟೋಗಳನ್ನು ಬಳಸಿ ಬಯೋಗ್ರಫಿ ತಯಾರಿಸಿದೆ. ಇದಕ್ಕೆ ಸುಮಾರು 500 ಫೋಟೋಗಳನ್ನು ಬಳಸಿಕೊಳ್ಳಲಾಗಿದ್ದು, 3 ಸಾವಿರ ಮೀಟರ್ ಉದ್ದದ ಬಟ್ಟೆಯನ್ನು ಬಳಸಿಕೊಳ್ಳಲಾಗಿದೆ.
ಸವದತ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ದಿ.ಆನಂದ ಚೋಪ್ರಾ ಅವರ ಪುತ್ರ ಸೌರಭ್ ಆನಂದ ಛೋಪ್ರಾ ಅವರು ಸಿದ್ದರಾಮಯ್ಯ ನಡೆದು ಬಂದ ಹಾದಿ ಮತ್ತು ಅವರ ಜೀವನ ಚರಿತ್ರೆ ಬಿಂಬಿಸಲು ಈ ವಿಶಿಷ್ಟ ಪ್ರಯತ್ನವನ್ನು ಮಾಡಿದ್ದಾರೆ.
ಗುರು ಬಿಗ್ ಬಿ ಆರ್ಟ್ಸ್ ಡಿಸೈನ್ ನ ಮೌನೇಶ ಬಡಿಗೇರ್ ಡಿಸೈನ್ ಮಾಡಿದ್ದು, ಸೂರತ್ ನಲ್ಲಿ ಮುದ್ರಿಸಲಾಗಿದೆ. ಇದಕ್ಕಾಗಿ ಸುಮಾರು 8 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆನಂದ ಛೋಪ್ರಾ ಅಭಿಮಾನಿ ಬಳಗ ಮತ್ತು ಎನ್ಕರೇಜ್ ಗ್ರೂಪ್ ಇದಕ್ಕಾಗಿ ಸುಮಾರು 15 ದಿನಗಳ ಕಾಲ ಶ್ರಮಿಸಿದೆ.
ಮೊದಲು ಇಚಲಕರಂಜಿಗೆ ತೆರಳಿ ಶಾಮಿಯಾನಾ ಬಟ್ಟೆ ತಯಾರಿಸುವವರ ಬಳಿ ಈ ಬಗ್ಗೆ ವಿಚಾರಿಸಲಾಗಿದೆ. ಆದರೆ, ಅವರಿಂದ ಸೂಕ್ತವಾದ ಬಟ್ಟೆ ಸಿಗದಿದ್ದಾಗ ಅವರೇ ಸಲಹೆ ನೀಡಿದಂತೆ ಸೂರತ್ ನಲ್ಲಿ ಸಂಪರ್ಕಿಸಲಾಗಿದೆ. ಅಲ್ಲಿ ಬೇಕಾದ ಬಟ್ಟೆ ಮತ್ತು ಮುದ್ರಣ ವ್ಯವಸ್ಥೆ ಅಲ್ಲಿ ಮಾಡಿಕೊಳ್ಳಲಾಗಿದೆ. 3000 ಮೀಟರ್ ಉದ್ದ ಮತ್ತು 6.5 ಮೀಟರ್ ಅಗಲದ ವಿಶೇಷ ಬಟ್ಟೆಯನ್ನು ಫೋಟೋ ಬಯೋಗ್ರಫಿ ಬಳಸಲಾಗಿದೆ.
ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಈ ಫೋಟೋ ಬಯೋಗ್ರಫಿಯನ್ನು ಸಿದ್ದರಾಮಯ್ಯ ವೇದಿಕೆಯಿಂದ 3 ಕಿಮೀ ದೂರದಲ್ಲಿ ಉದ್ಘಾಟಿಸಲಿದ್ದಾರೆ. ಅಲ್ಲಿಂದ ವೇದಿಕೆಯವರೆಗೂ ರೋಲನ್ನು ಬಿಡಿಸಿಕೊಂಡು ಬರಲಾಗುತ್ತದೆ. ಒಟ್ಟಾರೆ, ಈ ಆಟೋಬಯೋಗ್ರಫಿ ಸಿದ್ದರಾಮಯ್ಯ ಜೀವನದ ಅಮೃತ ಮಹೋತ್ಸವಕ್ಕೆ ವಿಶಿಷ್ಟ ಕೊಡುಗೆಯಾಗಲಿದೆ.
ಓದಿ : 'ಸಿಎಂ ಸಿದ್ದರಾಮಯ್ಯ ಬಾಸ್': ಚಿನ್ನದಿಂದ ಬರೆದ ಫಲಕ ಗಿಫ್ಟ್ ನೀಡಿದ ಅಭಿಮಾನಿ