ಬೆಳಗಾವಿ: ರಾಜ್ಯದ ಯಾವೊಬ್ಬ ಪ್ರಜೆಯೂ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು. ಈ ಯೋಜನೆಯನ್ನೇ ಬಂಡವಾಳ ಮಾಡಿಕೊಂಡಿರುವ ಅನೇಕರು ಬಡವರ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿಯನ್ನು ಮುಂಬೈನ ಕಾಳಸಂತೆಗೆ ಸಾಗಿಸುತ್ತಿರುವ ಕರಾಳ ದಂಧೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ.
ಈ ಅಕ್ರಮ ದಂಧೆಯ ಅಡ್ಡೆ ವಾಣಿಜ್ಯ ನಗರಿ ಹುಬ್ಬಳ್ಳಿಯೇ ಎಂಬುವುದು ತನಿಖೆಯಿಂದ ದೃಢಪಟ್ಟಿದೆ. ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಎರಡು ಪ್ರಕರಣಗಳನ್ನು ಬೇಧಿಸಿರುವ ಬೆಳಗಾವಿ ಜಿಲ್ಲೆಯ ಪೊಲೀಸರು ಬಡವರ ಅನ್ನಕ್ಕೆ ಕನ್ನ ಹಾಕಿದವರನ್ನು ಕಂಬಿ ಹಿಂದೆ ದೂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕೊರವಿಕೊಪ್ಪ ಕ್ರಾಸ್ ಬಳಿ ನಿನ್ನೆಯಷ್ಟೇ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದಿದ್ದಾರೆ. ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಸಿಪಿಐ ಉಳವಪ್ಪ ಸಾತೇನಹಳ್ಳಿ ನೇತೃತ್ವದ ತಂಡ ಅಂದಾಜು 7.39 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ.
ಕಳೆದ ವಾರವೂ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ಇಟಗಿ ಕ್ರಾಸ್ ಬಳಿ ಅನ್ನಭಾಗ್ಯ ಅಕ್ಕಿಯನ್ನು ಮುಂಬೈಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಯಲ್ಲಿ ತಡೆದು ಐವತ್ತು ಕೆಜಿಯ 1,200 ಅಕ್ಕಿ ಚೀಲ ಜಪ್ತಿ ಮಾಡಿಕೊಂಡಿದ್ದರು. ಅಲ್ಲದೇ ನಾಲ್ವರು ಆರೋಪಿಗಳನ್ನು ನಂದಗಡ ಪೊಲೀಸರು ಬಂಧಿಸಿದ್ದರು.
ಹುಬ್ಬಳ್ಳಿಯೇ ಅಕ್ರಮ ದಂಧೆಯ ಅಡ್ಡೆ : ಜಿಲ್ಲೆಯಲ್ಲಿ ಸೆರೆಸಿಕ್ಕ ಮೂರು ಲಾರಿ ಹಾಗೂ ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈ ಅಕ್ರಮ ದಂಧೆಯ ಮುಖ್ಯ ಅಡ್ಡೆ ವಾಣಿಜ್ಯ ನಗರಿ ಹುಬ್ಬಳ್ಳಿ ಎಂಬುವುದು ದೃಢ ಪಟ್ಟಿದೆ. ಹುಬ್ಬಳ್ಳಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ದಾಟಿ ಬರುತ್ತಿದ್ದ ಈ ಮೂರು ಲಾರಿಗಳಲ್ಲಿನ ಅಕ್ಕಿಯನ್ನು ಜಪ್ತಿ ಮಾಡಿರುವ ಬೆಳಗಾವಿ ಪೊಲೀಸರು ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿ ಮಹಾರಾಷ್ಟ್ರದ ಕಾಳಸಂತೆಗೆ ವ್ಯವಸ್ಥಿತವಾಗಿ ಕಳ್ಳ ಸಾಗಾಟ ಆಗುತ್ತಿದೆ. ಹುಬ್ಬಳ್ಳಿಯ ಗೋಡಾನ್ಗಳಲ್ಲಿ ದಾಸ್ತಾನು ಆಗುವ ಅಕ್ಕಿಯನ್ನು ಬೆಳಗಾವಿ ಮಾರ್ಗವಾಗಿ ಮುಂಬೈಗೆ ಸಾಗಿಸಲಾಗುತ್ತಿತ್ತು.
ರೂಟ್ ಚೇಂಜ್ ಮಾಡಿಯೂ ಸಿಕ್ಕಿಬಿದ್ದ ಕಳ್ಳರು : ಪುಣೆ-ಬೆಂಗಳೂರು ಹೆದ್ದಾರಿಯ ಮೂಲಕ ಅನ್ನಭಾಗ್ಯದ ಅಕ್ಕಿಯನ್ನು ಮುಂಬೈಗೆ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ನಂದಗಡ ಠಾಣೆಯ ಪೊಲೀಸರು ಇಟಗಿ ಕ್ರಾಸ್ ಬಳಿ ಎರಡು ಲಾರಿಗಳನ್ನು ತಡೆದಿದ್ದರು. ಯಾವುದೇ ದಾಖಲೆ ಇಲ್ಲದ ಕಾರಣ 50 ಕೆಜಿಯ 1,200 ಅಕ್ಕಿ ಚೀಲಗಳನ್ನು ನಂದಗಡ ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದ ಎಚ್ಚೆತ್ತ ಕಳ್ಳರು ಮಾರ್ಗವನ್ನು ಬದಲಿಸಿ ಕಳ್ಳಸಾಗಾಣೆಗೆ ಮುಂದಾಗಿದ್ದರು. ಬೈಲಹೊಂಗಲ ಮಾರ್ಗವಾಗಿ ಮುಂಬೈಗೆ ಲಾರಿ ಮೂಲಕ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಿಸುತ್ತಿದ್ದ ಕಳ್ಳರನ್ನು ಬೈಲಹೊಂಗಲ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಮಾರ್ಗಬದಲಿಸಿ ಅಕ್ರಮ ದಂಧೆಗೆ ಯತ್ನಿಸಿದ್ದ ಕಳ್ಳರು ಮತ್ತೊಮ್ಮೆ ಜಿಲ್ಲೆಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅಲ್ಲದೇ ಹುಬ್ಬಳ್ಳಿಯ ಪತೇಶ ನಗರದ ಜಮಾಲ್‍ಖಾನ್ ಪಠಾಣ್, ದಿಲಾವರಖಾನ್ ಪಠಾಣ್ ಹಾಗೂ ಮಂಜುನಾಥ ಹರ್ಲಾಪುರ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳಸಾಗಾಣೆಯ ಅಕ್ರಮ ದಂಧೆ ಹಾಗೂ ಇದರ ಕೇಂದ್ರಸ್ಥಾನ ಹುಬ್ಬಳ್ಳಿ ಎಂಬುವುದು ಬೆಳಕಿಗೆ ಬಂದಿದೆ.