ಬೆಳಗಾವಿ: ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಬೆಳಗಾವಿ ನಗರದಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಶೀಘ್ರವೇ ಈ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.
ಈ ಎಲ್ಲ 46 ಧಾರ್ಮಿಕ ಕೇಂದ್ರ ಕಟ್ಟಡಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಈಗಾಗಲೇ ಒಟ್ಟು 17 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಮಾಡಲಾಗಿದೆ. ಇನ್ನುಳಿದ 29 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಮಾಡಬೇಕಿದೆ.
ಇದರಲ್ಲಿ ಎಲ್ಲ ಧರ್ಮದ ಕಟ್ಟಡಗಳು ಸೇರಿವೆ. ನಿಪ್ಪಾಣಿಯಲ್ಲಿ 4 ಧಾರ್ಮಿಕ ಕೇಂದ್ರದ ಕಟ್ಟಡ ಸ್ಥಳಾಂತರಗೊಳಿಸಬೇಕಿದೆ. ಇದರಲ್ಲಿ ಯಾವುದೇ ಐತಿಹಾಸಿಕ ಕಟ್ಟಡಗಳಿಲ್ಲ. ರೆಗ್ಯೂಲರೈಸ್ಡ್ ಮಾಡಲೂ ಸಹ ನಮಗೆ ಅವಕಾಶವಿದೆ. ಟ್ರಾಫಿಕ್ ತೊಂದರೆ ಸೇರಿ ಸಾರ್ವಜನಿಕರಿಗೆ ತೊಂದರೆ ಆಗದೇ ಇರುವ ಕಟ್ಟಡಗಳ ರೆಗ್ಯುಲರೈಸ್ಡ್ ಮಾಡಲು ಅವಕಾಶವಿದೆ ಎಂದಿದ್ದಾರೆ.
29 ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಕಾರ್ಯ ಪೆಂಡಿಂಗ್ ಇದೆ. ಗಣೇಶೋತ್ಸವ ಮುಗಿದ ಮೇಲೆ ತೆರವು ಮಾಡಲು ಕ್ರಮ ಕೈಗೊಳ್ಳುತ್ತೇವೆ. ಸ್ಥಳೀಯರನ್ನು ವಿಶ್ವಾಸಕ್ಕೆ ತಗೆದುಕೊಂಡೇ ತೆರವು ಕಾರ್ಯಾಚರಣೆ ನಡೆಯಲಿದೆ. ಕೂಲಂಕಷವಾಗಿ ವಾರ್ಡ್‌ವಾರು ಪರಿಶೀಲಿಸಿ ಪಟ್ಟಿ ಮಾಡಲಾಗಿದೆ.
ಎಲ್ಲಾ ಸಣ್ಣಪುಟ್ಟ ಕಟ್ಟಡಗಳಿದ್ದು, ವಿವಾದ ಆಗುವಂತಹದ್ದು ಯಾವುದೂ ಇಲ್ಲ. ಈಗಾಗಲೇ 17 ಧಾರ್ಮಿಕ ಕಟ್ಟಡ ತೆರವು ಮಾಡಿದ್ದರೂ ಯಾವ ವಿರೋಧವಾಗಿಲ್ಲ. ತಾಲೂಕು ಕೇಂದ್ರಗಳ ಪೈಕಿ 4 ಕಟ್ಟಡಗಳು ನಿಪ್ಪಾಣಿಯಲ್ಲಿದ್ದು, ಅವುಗಳ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು ಎಂದು ಡಿಸಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೊಲೀಸರ ಭರ್ಜರಿ ಬೇಟೆ: 800 ಕೆಜಿ ಕ್ಯಾನಬೀಸ್ ವಶ, 5 ಮಂದಿ ಅರೆಸ್ಟ್