ಬೆಳಗಾವಿ : ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಇಡೀ ರಾಜ್ಯದಲ್ಲಿ 25 ಸಾವಿರ ಕಿ.ಮೀ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಲೋಕೋಪಯೋಗಿ ಇಲಾಖೆಯಲ್ಲಿ 192 ಕಿ.ಮೀ. ಇರುವ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಅದರಲ್ಲಿ 555 ಕಿ.ಮೀ. ಇದ್ದ ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿ ಆಗಿ ಮೇಲ್ದರ್ಜೆಗೆ ಏರಿಕೆ ಮಾಡಲಾಗಿದೆ ಎಂದರು.
ಇದಲ್ಲದೇ ಇಡೀ ರಾಜ್ಯದಲ್ಲಿ ಒಟ್ಟು (ಎಂಡಿಆರ್) 96,101 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಆ ಪೈಕಿ ಪಂಚಾಯತ್ ರಾಜ್ಯ ವ್ಯಾಪ್ತಿಯಲ್ಲಿರುವ 15,510 ಕಿ.ಮೀ (ಎಂಡಿಆರ್) ಹಳ್ಳಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಕೆ ಮಾಡಬೇಕೆಂಬ ಬೇಡಿಕೆ ಇತ್ತು.
ಹೀಗಾಗಿ, ಸೆ.01ಕ್ಕೆ ಇಡೀ ರಾಜ್ಯದ ಉದ್ದಗಲಕ್ಕೂ ಒಟ್ಟು 25 ಸಾವಿರ ಕಿಮೀ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. 25 ಸಾವಿರ ರಸ್ತೆ ಕಾಮಗಾರಿ 9,601 ಪೈಕಿ ಎಂಡಿಆರ್ಎಸ್ಹೆಚ್ ಮಾಡಲಾಗಿದ್ದು, 15,510 ಹಳ್ಳಿ ರಸ್ತೆಗಳನ್ನು ಎಂಡಿಆರ್ ಮಾಡಲಾಗಿದೆ ಎಂದರು.
ಒಟ್ಟು 25 ಸಾವಿರ ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಅವುಗಳನ್ನು ನಿರ್ವಹಣೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂಬರುವ ಹೊಸ ಬಜೆಟ್ನಲ್ಲಿ ಅನುಮೋದನೆ ಪಡೆದು ಕೆಲಸ ಕೈಗೆತ್ತಿಕೊಳ್ಳಲಾಗುವುದು.
ರಾಜ್ಯದಲ್ಲಿ ಈ ವರ್ಷ 2021ನೇ ಸಾಲಿಗೆ ₹3,500 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ಡಿಪಿಆರ್ ಮಾಡಲು ಸೂಚನೆ ಕೊಡಲಾಗಿದೆ. ಇಡೀ ರಾಜ್ಯದಲ್ಲಿ 3,500 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಿಸಲು ಸಿಎಂ ಬಿಎಸ್‌ವೈ ಅನುಮೋದನೆ ಕೊಟ್ಟಿದ್ದಾರೆ ಎಂದರು.