ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, 13 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಮ್ಮಲ್ಲಿನ ಗುಂಪುಗಾರಿಕೆ, ವೈಮನಸ್ಸು ತೆಗೆದುಹಾಕಲು ಅವಿರೋಧ ಆಯ್ಕೆಗೆ ಆದ್ಯತೆ ನೀಡಿದ್ದೆವು. ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಗೆ ನಾವೆಲ್ಲರು ಶ್ರಮಿಸಿದ್ದೇವೆ. ಕಹಿಘಟನೆ ಮರೆತು ಜಿಲ್ಲೆಯ ನಾಯಕರು ಒಂದಾಗಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಅಗ್ರಸ್ಥಾನಕ್ಕೆ ಏರಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.
16 ಸ್ಥಾನ ನಿರ್ದೇಶಕರಿರುವ ಬ್ಯಾಂಕ್ಗೆ 13 ಸ್ಥಾನಗಳ ಅವಿರೋಧ ಆಯ್ಕೆ ಮಾಡಲಾಗಿದೆ. ಖಾನಾಪುರ, ರಾಮದುರ್ಗ ಹಾಗೂ ಉಣ್ಣೆ ಸಹಕಾರ ಅಭಿವೃದ್ಧಿ ಮಂಡಳಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣೆ ನಡೆಯಲಿದೆ. ಶಾಸ್ತ್ರಕ್ಕೆ ಎಂಬಂತೆ ನವೆಂಬರ್ 6 ಕ್ಕೆ ಈ 3 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಡಿಸಿಎಂ ಸವದಿ ತಿಳಿಸಿದರು.
ಸಮಯದ ಅಭಾವದಿಂದ ಈ ಮೂರು ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಅಸಾಧ್ಯವಾಯಿತು. ಸಹಕಾರ ಕ್ಷೇತ್ರದಲ್ಲಿ ಯಾವುದೇ ಪಕ್ಷ ಬರುವುದಿಲ್ಲ. ಈಗಲೂ 6 ಸದಸ್ಯರು ಕಾಂಗ್ರೆಸ್ ಪಕ್ಷದವರೇ ನಿರ್ದೇಶಕರಾಗಿದ್ದಾರೆ. ನಿರ್ದೇಶಕರ ಚುನಾವಣೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ ಎಂದರು.
ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷ ಬರುವುದಿಲ್ಲ. ಸಮಯದ ಅಭಾವದ ಕಾರಣ ಆ ಮೂರು ಕ್ಷೇತ್ರಗಳ ಅವಿರೋಧ ಆಯ್ಕೆ ಸಾಧ್ಯವಾಗಲಿಲ್ಲ. ಅಂಜಲಿ ನಿಂಬಾಳ್ಕರ್ ಶಾಸಕಿ ಆಗಿ ನಾಮಪತ್ರ ಹಿಂಪಡೆಯಬೇಕಿತ್ತು. ಚುನಾವಣೆ ನಡೆಯಲಿ, ಅಂಜಿಲಿ ಎದುರಾಳಿಯನ್ನು ಗೆಲ್ಲಿಸುತ್ತೇವೆ. ಖಾನಾಪುರದ ಅರವಿಂದ ಪಾಟೀಲ, ರಾಮದುರ್ಗದ ಶ್ರೀಕಾಂತ್ ಧವಳ ಹಾಗೂ ಗಜಾನನ ಕೊಳ್ಳಿ ಗೆಲುವಿಗೆ ಬಿಜೆಪಿ ನಾಯಕರು ಶ್ರಮಿಸಲಿದ್ದಾರೆ ಎಂದರು.