ಬೆಳಗಾವಿ: ಮಹಿಳೆಗೆ ಚಪ್ಪಲಿ ಹಾರ ಹಾಕಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿ, ಅಮಾನುಷವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಮಹಿಳೆಯರೂ ಸೇರಿ ಒಟ್ಟು 13 ಮಂದಿಯನ್ನು ಬಂಧಿಸುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಹನಿ ಟ್ರ್ಯಾಪ್ ಮೂಲಕ ಅಮಾಯಕರಿಗೆ ವಂಚನೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ, ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಈ ಘಟನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣದ ಮುಖ್ಯ ಆರೋಪಿ ಅರ್ಜುನ ಗಂಡವ್ವಗೋಳ ಅವರನ್ನು ಶನಿವಾರ ರಾತ್ರಿ ಬಂಧಿಸಿದ್ದರು. ಭಾನುವಾರ ಮತ್ತೆ 12 ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಲಯ 12 ಮಂದಿಗೆ ಜಾಮೀನು ನೀಡಿದ್ದು, ಒಬ್ಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ 13 ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಘಟನೆ ಬಗ್ಗೆ ಹೇಳಿದ್ದಿಷ್ಟು:
ಘಟನೆ ಕುರಿತು ಪ್ರತಿಕ್ರಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ’’ಮಹಿಳೆ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ನಡೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನೀಡಿರುವ ದೂರಿನ ಮೆರೆಗೆ 13 ಜನರ ಮೇಲೆ ಪ್ರಕರಣ ದಾಖಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ‘‘ ಎಂದು ಹೇಳಿದ್ದಾರೆ
ಶುಕ್ರವಾರ ರಾತ್ರಿ ಘಟಪ್ರಭಾದ ಮೃತ್ಯುಂಜಯ ಸರ್ಕಲ್ನಲ್ಲಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಈ ಮಹಿಳೆ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಿದ್ದಾಳೆ ಜತೆಗೆ ತಮಗೂ ಕಿರುಕುಳ ನೀಡುತ್ತಿದ್ದಾಳೆ ಎಂದು ಸ್ಥಳೀಯರು ದೂರು ನೀಡಿದ್ದರು. ಇದರ ಬೆನ್ನೆಲೆ ಈ ರೀತಿಯ ಘಟನೆ ನಡೆದಿತ್ತು.
ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಘಟನೆ ಬಳಿಕ ಪ್ರತಿಕ್ರಿಯೆ ನೀಡಿದ್ದರು. ಕಳೆದ ತಿಂಗಳ 30ರಂದು ಸಂಘಟನೆಯೊಂದರ ಕೆಲವು ಜನ ನನ್ನ ಬಳಿ ಬಂದು 5 ಲಕ್ಷ ರೂ. ಕೊಡು, ಇಲ್ಲವಾದರೆ ನಿನ್ನ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು. ನಾನು ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಹಣ ಎಲ್ಲಿಂದ ಕೊಡಬೇಕು ಎಂದು ಪ್ರಶ್ನಿಸಿದ್ದೆ. ಬಳಿಕ ಶುಕ್ರವಾರ ರಾತ್ರಿ ನಮ್ಮ ಮನೆಗೆ ಬಂದ ಹಣ ಕೊಡು ಎಂದು ಮತ್ತೆ ಪೀಡಿಸಿದ್ದರು. ನಾನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ನಂತರ ಬೆತ್ತಲೆಗೊಳಿಸಿ, ಚಪ್ಪಲಿ ಮಾಲೆ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು.
ಇದನ್ನೂ ಓದಿ: ಘಟಪ್ರಭಾದಲ್ಲಿ ಅಮಾನವೀಯ ಘಟನೆ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ