ಬೆಂಗಳೂರು: ಆಶಾ ಕಾರ್ಯಕರ್ತರ ಮೇಲಿನ ಹಲ್ಲೆಗೆ ಕೊರೊನಾ ತಪಾಸಣೆ ಕಾರಣವಲ್ಲ. ಎನ್‌ಪಿಆರ್ ಮತ್ತು ಎನ್‌ಸಿಆರ್ ಬಗ್ಗೆ ಸರ್ವೆ ನಡೆಸಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಶಾಸಕ ಜಮೀರ್ ಅಹಮ್ಮದ್ ಪ್ರತಿಕ್ರಿಯಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಘಟನೆ ನಡೆದಿರುವುದು ಕೊರೊನಾ ತಪಾಸಣೆ ವಿಷಯಕ್ಕಲ್ಲ. ಎನ್‌ಸಿಆರ್ ವಿಚಾರಕ್ಕೆ ಸರ್ವೆ ಮಾಡಿದ್ದಕ್ಕೆ ಘಟನೆ ನಡೆದಿದೆ. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಾ ಎಂದೆಲ್ಲಾ ಆಶಾ ಕಾರ್ಯಕರ್ತರು ಪ್ರಶ್ನೆ ಕೇಳಿದ್ದಾರೆ. ಇದರಿಂದ ಜನ ರೊಚ್ಚಿಗೆದ್ದರು. ಆಶಾ ಕಾರ್ಯಕರ್ತರಿಗೆ ಅಲ್ಲಿಗೆ ಹೋಗಲು ಅನುಮತಿ ಕೊಟ್ಟವರು ಯಾರು? ಸರ್ಕಾರದ ಅನುಮತಿ ತೆಗೆದುಕೊಂಡು ಹೋಗಿದ್ದರಾ? ಎಂದರು.
ಮಸೀದಿಗಳಲ್ಲಿ ದಿನಕ್ಕೆ 5 ಬಾರಿ ಆಜಾದ್ ಕೂಗಲು ಯಾವುದೇ ತೊಂದರೆಯಿಲ್ಲ ಅಂತ ಸಿಎಂ ಹೇಳಿದ್ದಾರೆ. ಆದರೆ ಯಾರೂ ಮಸೀದಿಗಳಿಗೆ ಬಂದು ನಮಾಜ್ ಮಾಡಬಾರದು. ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿಕೊಳ್ಳಲಿ ಎಂದಿದ್ದಾರೆ. ಇದಕ್ಕೆ ನಮ್ಮ ಸಹಮತವೂ ಇದೆ ಎಂದರು.
ದೆಹಲಿಯ ನಿಜಾಮುದ್ದೀನ್‌ಗೆ ಹೋಗಿ ಬಂದವರು ತಪಾಸಣೆ ಮಾಡಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.