ಬೆಳಗಾವಿ: ನಿನ್ನೆ ಟ್ವೀಟ್ ಮೂಲಕ ಯುವನಿಧಿ ಅರ್ಜಿ ನೋಂದಣಿ ಡಿಸೆಂಬರ್ 21ಕ್ಕೆ ಆರಂಭವಾಗಲಿದೆ ಎಂದಿದ್ದ ಕೌಶಲ್ಯಾಭಿವೃದ್ಧಿ ಸಚಿವ ಶರಣು ಪ್ರಕಾಶ್ ಪಾಟೀಲ್ ಇಂದು ಆರಂಭವಾಗುವ ದಿನಾಂಕ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, ಡಿಸೆಂಬರ್ 21ಕ್ಕೆ ಯುವನಿಧಿ ನೊಂದಣಿಯಿಲ್ಲ. ಬಹುಶ: ಡಿಸೆಂಬರ್ ಕೊನೆವಾರದಲ್ಲಿ ನೊಂದಣಿ ಪ್ರಕ್ರಿಯೆ ಶುರು ಮಾಡುತ್ತೇವೆ. ಜನವರಿಯಿಂದ ಯುವನಿಧಿ ಪ್ರಾರಂಭ ಮಾಡ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ನೋಂದಣಿ ಪ್ರಕ್ರಿಯೆ ದಿನಾಂಕವನ್ನು ಪ್ರಕಟ ಮಾಡುತ್ತೇನೆ. ಬಹುತೇಕ ಕೊನೆಯ ವಾರದಲ್ಲೇ ನೋಂದಣಿ ಪ್ರಕ್ರಿಯೆ ಆರಂಭಿಸುತ್ತೇವೆ. ಜನವರಿಯಿಂದ ಯುವ ನಿಧಿ ಹಣ ಕೊಡುತ್ತೇವೆ ಎಂದಿದ್ದಾರೆ.
ನಿನ್ನೆ ಸ್ವತಃ ಸಚಿವರು ಎಕ್ಸ್ ಫೋಸ್ಟ್ ಮೂಲಕ ಡಿಸೆಂಬರ್ 21ಕ್ಕೆ ಯುವನಿಧಿ ನೋಂದಣಿ ಪ್ರಕ್ರಿಯೆ ಆರಂಭ ಎಂದಿದ್ದರು. ಇದೀಗ ಕೊನೆಯ ವಾರದಲ್ಲಿ ಯುವನಿಧಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಯುವನಿಧಿ ನೋಂದಣಿ ದಿನಾಂಕದ ಬಗ್ಗೆ ಗೊಂದಲ ಉಂಟಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ತನ್ನ ಪಂಚಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಅನ್ನಭಾಗ್ಯ ಮತ್ತು ಶಕ್ತಿಯೋಜನೆಯನ್ನು ಜಾರಿಗೊಳಿಸಿದೆ.
ಇದೆಲ್ಲಾ ರಾಜಕೀಯ ಗಿಮಿಕ್: ಸರ್ಕಾರದ ವಿರುದ್ಧ ಯಡಿಯೂರಪ್ಪ ಅವರ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಏನಕ್ಕೆ ಯಡಿಯೂರಪ್ಪ ಅವರ ಹೋರಾಟ? ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಏನು ಮಾಡಿದ್ರು?. ಇದೆಲ್ಲವೂ ರಾಜಕೀಯ ಗಿಮಿಕ್. ಅಧಿಕಾರ ಕಳೆದುಕೊಂಡ ಮೇಲೆ ಹೋರಾಟ ಸಹಜ. ಮೊಸರಲ್ಲಿ ಕಲ್ಲು ಹುಡುಕುವುದು ಎಂದರೆ ಇದೇ. ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಸರ್ಕಾರಕ್ಕೆ ಒಳ್ಳೆಯ ಹೆಸರು ಬರ್ತಿದೆ. ಅವರಿಗೆ( ಯಡಿಯೂರಪ್ಪ) ಪುತ್ರ ವ್ಯಾಮೋಹ ಇರಬಹುದು ಎಂದು ಸಚಿವ ಶರಣಪ್ರಕಾಶ್ ಟೀಕಿಸಿದರು.
ಸರ್ಕಾರದ ಅಭಿಪ್ರಾಯವೇ ನನ್ನ ಅಭಿಪ್ರಾಯ: ಎಐಸಿಸಿ ಅಧ್ಯಕ್ಷರ ಜಾತಿ ಗಣತಿ ವಿಚಾರ ಬಂದಾಗ ಮೇಲ್ಜಾತಿಯವರೆಲ್ಲಾ ಒಂದಾಗ್ತಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನನಗೆ ಗೊತ್ತಿಲ್ಲ. ಕಾಂತರಾಜ್ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರದ ಅಭಿಪ್ರಾಯವೇ ನನ್ನ ಅಭಿಪ್ರಾಯ. ಸರ್ಕಾರ ಏನು ತೀರ್ಮಾನ ಮಾಡುತ್ತದೆ. ಅದಕ್ಕೂ ಮುಂಚೆ ಎಲ್ಲರನ್ನೂ ಪರಿಗಣಿಸಿ, ವಿಶ್ವಾಸಕ್ಕೆ ಪಡೆದು ನಿರ್ಧಾರವಾಗುತ್ತದೆ. ಅದೇ ನಿರ್ಧಾರ ನನ್ನದು ಸಹ. ಸರ್ಕಾರ ಯಾವುದೇ ಅಭಿಪ್ರಾಯ ತೆಗೆದುಕೊಂಡರು ಅದೇ ನನ್ನ ಅಭಿಪ್ರಾಯ ಎಂದು ಸಚಿವರು ಸ್ಪಷ್ಟಪಡಿಸಿದರು.
ಓದಿ: ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಡಿ.21ರಿಂದ ನೋಂದಣಿ ಪ್ರಕ್ರಿಯೆ ಆರಂಭ: ಷರತ್ತುಗಳು ಅನ್ವಯ