ಬೆಂಗಳೂರು: ನನ್ನಂತಹ ಸಾಮಾನ್ಯ ಯುವ ಕಾರ್ಯಕರ್ತನಿಗೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಸಂಘಟನೆಯ ಎಲ್ಲಾ ಹಿರಿಯರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಸಂತಸ ಹಂಚಿಕೊಂಡ ಅವರು, ಯುವ ಮೋರ್ಚಾ ವತಿಯಿಂದ ದೇಶಾದ್ಯಂತ ಭವಿಷ್ಯದ ನಾಯಕರನ್ನು ಹುಟ್ಟುಹಾಕುವ ಕಾರ್ಯ ನಡೆಯಲಿದ್ದು, ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಪ್ರೋತ್ಸಾಹಿಸಿ ವಿಶ್ವದ ಅತಿ ದೊಡ್ಡ ಸಂಘಟನೆಯ, ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಹಾಗೂ ಯುವ ರಾಷ್ಟ್ರವೊಂದರ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿಯಂತಹ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುತ್ತಾ, ಬೆಂಗಳೂರು ಔಟರ್ ರಿಂಗ್ ರೋಡ್ ಮತ್ತು ಏರ್ಪೋರ್ಟ್ ವರೆಗಿನ ಮೆಟ್ರೋ ಕಾಮಗಾರಿಯ ತ್ವರಿತ ಅನುಮೋದನೆಗೆ ಒತ್ತು ನೀಡುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿರವರನ್ನು ಭೇಟಿಯಾಗಿ ಒತ್ತಾಯಿಸಲಾಗಿದೆ. 17 ಕಿಮೀ ಔಟರ್ ರಿಂಗ್ ರೋಡ್ನಲ್ಲಿ ನೆಲೆಗೊಂಡಿರುವ ಹಲವು ಸಾಫ್ಟ್ವೇರ್ ಸಂಸ್ಥೆಗಳಿಂದ ಶೇ.32 ರಷ್ಟು ಐಟಿ ಆದಾಯ ಬೆಂಗಳೂರು ನಗರಕ್ಕೆ ದೊರಕಲಿದ್ದು, ಸುಮಾರು 5.5 ಲಕ್ಷ ನಾಗರಿಕರು ಈ ಕಾರಿಡಾರ್ನಲ್ಲಿ ಉದ್ಯೋಗ ಹೊಂದಿದ್ದಾರೆ. ಪೀಕ್ ಅವಧಿಯಲ್ಲಿ ಇಲ್ಲಿನ ಟ್ರಾಫಿಕ್ ವೇಗ ಕೇವಲ 4 ಕಿ.ಮೀ ಪ್ರತಿ ಘಂಟೆಗೆ ಚಲಿಸುತ್ತದೆ. ಪ್ರಸ್ತುತ ಇರುವ 42 ಕಿಮೀ ಮೆಟ್ರೋ ಲೈನ್ನಿಂದ ಏರ್ಪೋರ್ಟ್ ಸಂಪರ್ಕ ಸಾಧ್ಯವಿರದಿದ್ದರಿಂದ ಮೆಟ್ರೋವನ್ನು ಏರ್ಪೋರ್ಟ್ ಸಂಪರ್ಕಗೊಳಿಸಲು ಅನುವಾಗುವಂತೆ ತ್ವರಿತ ಒಪ್ಪಿಗೆ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ರಲ್ಲಿ, 83 ಲಘು ಹಾರಾಟ ವಿಮಾನ ತೇಜಸ್ ಮಾರ್ಕ್ 1 ನ ತ್ವರಿತ ಅನುಮೋದನೆ ಹಾಗೂ ಹೆಚ್.ಎಲ್ನಲ್ಲಿ ಇವುಗಳ ಉತ್ಪಾದನೆಗೆ ಅನುವು ಮಾಡಿಕೊಡಬೇಕೆಂದು ವಿನಂತಿಸಿರುವುದಾಗಿ ತಿಳಿಸಿದರು.
ಈರುಳ್ಳಿ ಬೆಳೆಗಳ ರಫ್ತು ನಿಷೇಧಿಸಿ ಸೆಪ್ಟೆಂಬರ್ 14 ರಂದು ಆದೇಶ ಹೊರಡಿಸಿದ್ದು, ಇದರಲ್ಲಿ ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುವ ಬೆಂಗಳೂರು ರೋಜ್ ಈರುಳ್ಳಿ ತಳಿಯು ಕೂಡ ಒಂದಾಗಿದೆ ಈ ನಿಷೇಧ ತೆರವುಗೊಳಿಸುವ ಕುರಿತು ಕೇಂದ್ರ ವಾಣಿಜ್ಯ, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ರನ್ನು 3 ಸಲ ಭೇಟಿಯಾಗಿ ಮನವಿ ಸಲ್ಲಿಸಿದ್ದು, ರಫ್ತು ನಿಷೇಧ ತೆರವು ಆದೇಶ ಶೀಘ್ರದಲ್ಲಿಯೇ ಹೊರಬೀಳಲಿದೆ ಎಂದರು.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ರವರನ್ನು ಭೇಟಿಯಾಗಿ ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯ ಗೋವಿಂದರಾಜ ನಗರದಲ್ಲಿ ಪ್ರಥಮ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿದ್ದೇನೆ. ಇದರಿಂದ ಅನೇಕ ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪ್ರಸ್ತಾವನೆಯನ್ನು ಪರಿಶೀಲಿಸಿ ಕೇಂದ್ರೀಯ ವಿದ್ಯಾಲಯ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿವರಿಸಿದ್ದಾರೆ.