ಬೆಂಗಳೂರು : 'ಕಾಂಗ್ರೆಸ್ ಕೊಲೆಗಡುಕ ಪಕ್ಷ' ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಯುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿ, ನಳಿನ್ ಕುಮಾರ್ ಕಟೀಲು ಭಾವಚಿತ್ರ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮನೋಹರ್, ಮಾಧ್ಯಮಕ್ಕೆ ಸಂದರ್ಶನ ನೀಡುವ ವೇಳೆ ನಳಿನ್ ಕುಮಾರ್ ಕಟೀಲು, ಕೊರೊನಾ ತಡೆಗಟ್ಟಲು ಹಿಂದಿನ ಸರ್ಕಾರಗಳು ವಿಫಲವಾಗಿವೆ, ಇದಕ್ಕೆ ಕಾಂಗ್ರೆಸ್ ನೇರ ಹೊಣೆ. ಕಾಂಗ್ರೆಸ್ ಕೊಲೆಗಡುಕ ಪಕ್ಷ ಎಂದು ಹೇಳಿದ್ದಾರೆ. ಆದರೆ, ಇಷ್ಟೊಂದು ಜನರ ಸಾವು ನೋವಿಗೆ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರಗಳು ಕಾರಣ ಎನ್ನುವುದು ಜನತೆಗೆ ಅರಿವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಮಾತನಾಡುವ ಒಬ್ಬ ವ್ಯಕ್ತಿ ಬಿಜೆಪಿಯ ಅಧ್ಯಕ್ಷರಾಗಿರುವುದು ನಿಜಕ್ಕೂ ದುರಂತ ಸಂಗತಿ ಎಂದರು.
ಇದನ್ನೂ ಓದಿ: ಕೋತಿ ಮೊಸರನ್ನು ತಿಂದು ಮೇಕೆ ಬಾಯಿಗೆ ಒರೆಸಿತು: ಕಟೀಲ್‌ಗೆ ಈಶ್ವರ್ ಖಂಡ್ರೆ ಟಾಂಗ್
ಯಾವುದೇ ರಾಜಕೀಯ ಪಕ್ಷದಲ್ಲಿ ಒಬ್ಬ ಅವಿವೇಕಿ ಹಾಗೂ ಅನಾಗರಿಕ ರಾಜಕಾರಣಿ ಇದ್ದರೆ ಅದು ನಳಿನ್ ಕುಮಾರ್ ಕಟೀಲು ಮಾತ್ರ. ಇವರನ್ನು ಕೂಡಲೇ ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು. ಕೋವಿಡ್ ತಡೆಗಟ್ಟಲು ಕಾರ್ಯಕ್ರಮ ರೂಪಿಸುವ ಬದಲು, ತಮ್ಮ ತಪ್ಪನ್ನು ಬೇರೆ ರಾಜಕೀಯ ಪಕ್ಷದ ಮೇಲೆ ಹಾಕುವ ಕುತಂತ್ರವನ್ನು ಮಾಡುವುದನ್ನು ಬಿಜೆಪಿಯವರು ಬಿಡಬೇಕು. ನಳಿನ್ ಕುಮಾರ್ ಒಬ್ಬ ಅವಿವೇಕಿ ರಾಜಕಾರಣಿಯಾಗಿದ್ದು, ಅಸಮಂಜಸ ಹೇಳಿಕೆ ನೀಡಿದ್ದಾರೆ. ಜನರನ್ನ ರಕ್ಷಣೆ ಮಾಡಲು ಸಾಧ್ಯವಾಗದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಿಜವಾದ ಕೊಲೆಗಡುಕ. ನಮ್ಮ ಪ್ರತಿಭಟನೆ ಮೂಲಕ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.