ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಾಣಸವಾಡಿ ಪೆಟ್ರೋಲ್ ಬಂಕ್ ಬಳಿ ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪೆಟ್ರೋಲ್ ದರ ನಗರದಲ್ಲಿ ನೂರರ ಗಡಿ ದಾಟಿದೆ. ಡೀಸೆಲ್ ದರ 90 ರೂ ದಾಟಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಹೆಚ್ಚಾಗುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದೆಡೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಯುವ ಕಾಂಗ್ರೆಸ್ ನಾಯಕ ಮಹಮ್ಮದ್ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ವಿನೂತನವಾಗಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಲಪಾಡ್, ಮೋದಿಗೆ ಹೆಂಡತಿಯಿಲ್ಲ, ಹೀಗಾಗಿ ಗ್ಯಾಸ್ ದರ ಏರಿಕೆ ಬಗ್ಗೆ ಗೊತ್ತಾಗಲ್ಲ. ವಿಮಾನದಲ್ಲಿ ಓಡಾಡ್ತಾರೆ ಹೀಗಾಗಿ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಗೊತ್ತಾಗಲ್ಲ ಎಂದ್ರು. ನಿಮಗೆ ಆಡಳಿತ ನಡೆಸಲು ಆಗಿಲ್ಲ ಅಂದ್ರೆ ಕಾಂಗ್ರೆಸ್ಗೆ ಅಧಿಕಾರ ಬಿಟ್ಟು ಕೊಡಿ. ನಮ್ಮಲ್ಲಿ ಡಿಕೆ ಶಿವಕುಮಾರ್ ಅಂತಹ ನಾಯಕರಿದ್ದಾರೆ. ನಾವು ಆಡಳಿತ ನಡೆಸುತ್ತೇವೆ. ಸರ್ಕಾರಕ್ಕೆ ಜನಸಾಮಾನ್ಯರ ನೋವು ಅರ್ಥ ಆಗ್ತಿಲ್ಲ. ಹೀಗಾಗಿ ಪಿಪಿಇ ಕಿಟ್ ಧರಿಸಿ ಕ್ರಿಕೆಟ್ ಆಡಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಒಂದೇ ದಿನ ಯೂಥ್ ಕಾಂಗ್ರೆಸ್ ಎರಡು ಬಣದಿಂದ ಪ್ರತಿಭಟನೆ ವಿಚಾರ ಮಾತನಾಡಿ, ಎಲ್ಲಾ ಜಿಲ್ಲೆ, ಬ್ಲಾಕ್ ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ ಇದಕ್ಕೆ ವಿಶೇಷ ಅರ್ಥ ಬೇಡ ಎಂದರು. ಪ್ರತಿಭಟನೆಯನ್ನು ತಡೆಯಲು ಮುಂದಾದ ಪೊಲೀಸರು ನಲಪಾಡ್ ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.