ಕೆ.ಆರ್.ಪುರ (ಬೆಂಗಳೂರು): ಮುಂಬರುವ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಚಾಲನೆ ನೀಡಿದರು.
ಪದವೀಧರ ಕ್ಷೇತ್ರ ಹಾಗೂ ಯುವ ಕಾಂಗ್ರೆಸ್ ಚುನಾವಣೆ ಅಖಾಡ ಸಿದ್ದವಾಗಿದ್ದು, ಪಕ್ಷವನ್ನು ಸಂಘಟಿಸುವ ಹಿನ್ನೆಲೆ ವಿಧಾನಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕೆ.ಆರ್.ಪುರ ಕ್ಷೇತ್ರದ ಬಸವನಪುರದಲ್ಲಿ ನಡೆಸಲಾಯಿತು. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಮುಖ್ಯವಾಗಿ ಯುವ ಕಾಂಗ್ರೆಸ್ ಸಂಘಟಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯಾಂದ್ಯತ ಯುವ ಕಾಂಗ್ರೆಸ್ ಅಭ್ಯರ್ಥಿಗಳ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಈ ಹಿನ್ನೆಲೆ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದಲ್ಲೂ ಸದಸ್ಯತ್ವ ನೋಂದಣಿ ಆರಂಭ ಮಾಡಲಾಗಿದ್ದು, 22 ರಂದು ಸದಸ್ಯತ್ವ ನೋಂದಣಿ ನಡೆಯುತ್ತದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಆರ್. ಪುರದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕು.
ಮೊದಲು ಇಡೀ ಕ್ಷೇತ್ರದಲ್ಲಿ ಒಬ್ಬ ಯೂತ್ ಕಾಂಗ್ರೆಸ್ ಅಧ್ಯಕ್ಷರನ್ನು ಮಾಡಲಾಗಿತ್ತು. ಆದರೆ, ಈ ವರ್ಷದಿಂದ ಬ್ಲಾಕ್ಗೆ ಒಬ್ಬ ಅಭ್ಯರ್ಥಿ ಆಯ್ಕೆ ಮಾಡಲು ನಿರ್ಧಾರ ಮಾಡಲಾಗಿದೆ. ಅಭ್ಯರ್ಥಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಮೂಲಕ ಜಯಗಳಿಸಬೇಕು. ಸೋತವರಿಗೂ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುತ್ತದೆ. ಈಗ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 881 ಶಿಕ್ಷಕರು ನೋಂದಣಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಅಭ್ಯರ್ಥಿಯಾಗಿ ಪ್ರವೀಣ್ ಅವರನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿ ಗೆಲ್ಲಲು ಮುಖಂಡರು ಶ್ರಮೀಸಬೇಕು ಎಂದರು.