ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಕಟೀಲ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನಕ್ಕೆ ಜಮಾಯಿಸಿದ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಜೋಕರ್ ಕಟೀಲ್ ಎಂದು ಪ್ಲೇ ಕಾರ್ಡ್ ಪ್ರದರ್ಶಿಸಿದರು.
ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ : ಪ್ರತಿಭಟನೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಇದನ್ನು ಅರಿತ ಪೊಲೀಸರು ಕಚೇರಿ ತಲುಪುವ ಮುನ್ನವೇ ಪ್ರತಿಭಟನಾಕಾರರನ್ನು ತಡೆದು ಬಂಧಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ಒಂದೇ ದಿನಕ್ಕೆ ಕಾಂಗ್ರೆಸ್ ಅದನ್ನು ವಾಪಸ್ ಪಡೆದು ಪರಿಸ್ಥಿತಿ ತಿಳಿಗೊಳಿಸುವ ಯತ್ನ ನಡೆಸುತ್ತಿದೆ. ಇದೀಗ ಹುಬ್ಬಳ್ಳಿಯಲ್ಲಿ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತನಾಡುವ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಅಗೌರವ ತರುವಂತೆ ಯಾರೂ ಮಾತನಾಡಬಾರದು : ಕಟೀಲ್‌ಗೆ ಬಿಎಸ್ವೈ 'ತಿವಿ' ಮಾತು
ಎಐಸಿಸಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ರಾಹುಲ್ ಗಾಂಧಿ ವಿರುದ್ಧ ಕಟೀಲ್ ಆಡಿದ ಮಾತನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ. ಆದರೆ, ಇದುವರೆಗೂ ತಾವು ಆಡಿದ ಮಾತನ್ನು ಹಿಂಪಡೆಯುವ ನಿರ್ಧಾರವನ್ನು ಕಟೀಲ್ ಮಾಡಿಲ್ಲ.
ಇದನ್ನೂ ಓದಿ: ಚುನಾವಣಾ ಪೈಪೋಟಿ.. ಟ್ವೀಟ್ ವಾರ್ ಬಳಿಕ ರಾಹುಲ್ ವಿರುದ್ಧ ಕಟೀಲ್ ವಿವಾದಾತ್ಮಕ ಹೇಳಿಕೆ