ಬೆಂಗಳೂರು: ದ್ವಿಚಕ್ರ ವಾಹನದ ಟೈರ್ ಸ್ಫೋಟಗೊಂಡು ಹೊಸಕೆರೆಹಳ್ಳಿಯ ನೈಸ್ ಟೋಲ್ ಬಳಿ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಯುವತಿ ಸುಲೋಚನ (24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅರ್ಧ ಹೆಲ್ಮೆಟ್ ಧರಿಸಿದ್ದರಿಂದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿತ್ತು. ಮತ್ತೋರ್ವ ಸವಾರ ಆನಂದ್ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ಸುಲೋಚನಾ ಹಾಗೂ ಆನಂದ್ ಕೆಲಸ ಮುಗಿಸಿ ನಿನ್ನೆ ಸಂಜೆ ಕೋರಮಂಗಲದಿಂದ ಮನೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದರು. ನೈಸ್ ರಸ್ತೆಯ ಟೋಲ್ ಬಳಿ ದ್ವಿಚಕ್ರ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡಿದ್ದು ನಿಯಂತ್ರಣ ತಪ್ಪಿ ಇಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಲೋಚನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಅಪರಾಧ ಸುದ್ದಿಗಳು..: ಮನೆ ಯಜಮಾನಿಯ ಕೈಕಾಲು ಕಟ್ಟಿ ಚಿನ್ನಾಭರಣ ಕದ್ದೊಯ್ದಿರುವ ಗಟನೆ ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಮನೆಯಲ್ಲಿ ಯಾರೂ ಇರದಿದ್ದಾಗ ತನ್ನ ಸಹಚರರೊಂದಿಗೆ ನುಗ್ಗಿದ್ದ ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ ಬಿಕಾಸ್ ಸಿಂಗ್, ಮನೆಯಲ್ಲಿದ್ದ ಮಹಿಳೆಯ ಕೈಕಾಲು ಕಟ್ಟಿ 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ಮನೆಯಲ್ಲಿ ಕಳ್ಳರ ಕೈಚಳಕ: ಉದ್ಯಮಿ ಮನೆಯಲ್ಲಿ ಯಾರೂ ಇರದಿದ್ದಾಗ ಬೀರುವಿನಲ್ಲಿದ್ದ 27 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಕಳ್ಳರು ಪರಾರಿಯಾಗಿರುವ ಘಟನೆ ನಿನ್ನೆ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. ಘಟನೆಯ ಬಳಿಕ ಮನೆ ಕೆಲಸದಾಕೆ ಸುಜಾತ ಎಂಬಾಕೆ ಕೆಲಸಕ್ಕೆ ಗೈರಾಗಿದ್ದು, ಮನೆ ಮಾಲೀಕ ಹರ್ಷ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚರಂಡಿ ನೀರು ಹರಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಗಾಯಾಳುಗಳು ಆಸ್ಪತ್ರೆಗೆ ದಾಖಲು