ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗಷ್ಟೇ ಗೀಸರ್ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಗೀಸರ್ ಗ್ಯಾಸ್ ಸೋರಿಕೆಯಾಗಿ ಯುವತಿ ಸಾವನ್ನಪ್ಪಿದ ಘಟನೆ ಬಸವೇಶ್ವರ ನಗರದ ಕೃಷ್ಣ ಕಲ್ಯಾಣ ಮಂಟಪ ಬಳಿ ನಡೆದಿದೆ. ಡಿಸೆಂಬರ್ 20 ರಂದು ಮಧ್ಯಾಹ್ನ ಇಂತಹ ದುರಂತ ನಡೆದಿದ್ದು, ಈಗಷ್ಟೇ ಬೆಳಕಿಗೆ ಬಂದಿದೆ.
ರಾಜೇಶ್ವರಿ (23) ಮೃತ ಯುವತಿ. ಮಧ್ಯಾಹ್ನ 1.45 ರಿಂದ 2 ಗಂಟೆ ಸುಮಾರಿಗೆ ಸ್ನಾನಕ್ಕೆ ತೆರಳಿದ್ದ ರಾಜೇಶ್ವರಿ ಬಹಳ ಸಮಯವಾದರೂ ಹೊರಗಡೆ ಬಂದಿರಲಿಲ್ಲ. ನಂತರ ಮನೆಯವರು ಬಾಗಿಲು ತೆಗೆದು ನೋಡಿದಾಗ ರಾಜೇಶ್ವರಿ ತೀವ್ರ ಅಸ್ವಸ್ಥಳಾಗಿರುವುದು ತಿಳಿದಿದೆ. ತಕ್ಷಣ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಾಗಿ ಗರ್ಭಿಣಿ ಸಾವು, ಮಗು ಸ್ಥಿತಿ ಗಂಭೀರ
ಇತ್ತೀಚಿನ ಘಟನೆಗಳು: ಗ್ಯಾಸ್ ಗೀಸರ್ ಲೀಕ್ ಆಗಿ ಗರ್ಭಿಣಿ ಸಾವು: ಗ್ಯಾಸ್ ಗೀಸರ್ ಸೋರಿಕೆಯಾಗಿ ಮೊನ್ನೆ ತಾನೇ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಅಶ್ವಥ್ ನಗರದಲ್ಲಿ ನಡೆದಿತ್ತು. ಮೃತ ಮಹಿಳೆ ತಮ್ಮ 4 ವರ್ಷದ ಮಗುವಿನೊಂದಿಗೆ ಸ್ನಾನ ಮಾಡಲು ಹೋಗಿದ್ದಾಗ ಗ್ಯಾಸ್ ಗೀಸರ್ನಿಂದ ವಿಷ ಅನಿಲ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಸೋರಿಕೆಯಾದ ವಿಷ ಅನಿಲ ಸೇವಿಸಿದ್ದರಿಂದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ತಾಯಿ - ಮಗು ಕುಸಿದು ಬಿದ್ದಿದ್ದರು. ಬಹಳ ಹೊತ್ತಾದರೂ ಸಾನ್ನದ ಕೊಠಡಿಯಿಂದ ಹೊರ ಬಾರದಿದ್ದಕ್ಕೆ ಅನುಮಾನಗೊಂಡ ಪತಿ ಹೋಗಿ ನೋಡಿದಾಗ ಕುಸಿದು ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರ ನೆರವಿನಿಂದ ತಾಯಿ - ಮಗುವನ್ನು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗರ್ಭಿಣಿ ಮಹಿಳೆ ಮೃತಪಟ್ಟಿದ್ದರು. ಮಗುವಿನ ಸ್ಥಿತಿ ಗಂಭೀರವಾಗಿತ್ತು.
ಇನ್ನು ಇದೇ ತರಹ ಕಳೆದ ಜೂನ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಿದ್ದ ನವ ಜೋಡಿ ಜೊತೆಯಾಗಿ ಸ್ನಾನಕ್ಕೆ ತೆರಳಿದ್ದು ಅಲ್ಲಿ ಗ್ಯಾಸ್ ಗೀಸರ್ನಿಂದ ವಿಷ ಅನಿಲ ಸೋರಿಕೆ ಸೇವನೆಯಿಂದ ಅಲ್ಲೇ ಉಸಿರು ಚೆಲ್ಲಿದ್ದರು. ಬಾತ್ರೂಂನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿದ್ದರಿಂದ ಕಾರ್ಬನ್ ಮೊನಾಕ್ಸೆಡ್ ಸೋರಿಕೆಯಾಗಿ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದರು. ಈ ಘಟನೆ ಯಲಹಂಕ ತಾಲೂಕಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿತ್ತು.