ಬೆಂಗಳೂರು : ಸೂಪರ್ ಮಾರ್ಕೆಟ್ನಲ್ಲಿ ಬಿಲ್ಲಿಂಗ್ ವೇಳೆ ಕಾಯಲು ಒಪ್ಪದ ಅಪರಿಚಿತ ಯುವಕನೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಇದೇ ತಿಂಗಳ 14 ರಂದು ಜೆ.ಪಿ.ನಗರ ನಾಲ್ಕನೇ ಹಂತದ ಎಂ.ಕೆ.ಅಹಮದ್ ಸೂಪರ್ ಮಾರ್ಕೆಟ್ನಲ್ಲಿ ನಡೆದಿದೆ.
ಯಲಹಂಕ ನಿವಾಸಿ ಸುಜಾತ ಎಂಬುವವರ ಮುಖಕ್ಕೆ ಹೊಡೆದು ಯುವಕನೊಬ್ಬ ದರ್ಪ ಮೆರೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ದಿನಸಿ ವಸ್ತುಗಳನ್ನ ಖರೀದಿಸಲು ಬಂದಿದ್ದ ಸುಜಾತ ಕೌಂಟರ್ನಲ್ಲಿ ಬಿಲ್ಲಿಂಗ್ ಮಾಡಿಸುತಿದ್ದಾಗ ಅವರ ಹಿಂದೆ ನಿಂತಿದ್ದ ಆರೋಪಿ ಬೇಗನೇ ಬಿಲ್ಲಿಂಗ್ ಮಾಡಿಸುವಂತೆ ಒತ್ತಾಯಿಸಿದ್ದ.
ಈ ವೇಳೆ ಹಿರಿಯರಿದ್ದೇವೆ ಕೊಂಚ ತಾಳ್ಮೆಯಿಂದ ವರ್ತಿಸಿ ಎಂದು ಸುಜಾತ ಸೂಚಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿ ಯುವಕ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಯುವಕನ ವರ್ತನೆ ಕಂಡು ಮಾರ್ಕೆಟ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಮಾರ್ಕೆಟಿನಿಂದ ಆಚೆ ಬರುವ ವೇಳೆ ಸಹ ಮತ್ತೋರ್ವ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿ ಯುವಕನ ವಿರುದ್ಧ ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ.
ಇದನ್ನೂ ಓದಿ: ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ ಸಹೋದರರ ಹಣೆಗೆ ಗನ್ ಇಟ್ಟು ಮನಸೋ ಇಚ್ಛೆ ಹಲ್ಲೆ