ಬೆಂಗಳೂರು : ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಕೆಂಗೇರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ನೆಲಕ್ಕೆ ಬಿದ್ದಾಗ ಅದರ ಹಿಂಬದಿ ಚಕ್ರ ಹರಿದ ಪರಿಣಾಮ ತೇಜಸ್ (22) ಎಂಬಾತ ಸಾವನ್ನಪ್ಪಿದ್ದಾನೆ.
ಮೃತ ತೇಜಸ್ ಮಧ್ಯಾಹ್ನ 12-25ರ ಸುಮಾರಿಗೆ ಉತ್ತರಹಳ್ಳಿ ರಸ್ತೆಯಲ್ಲಿ ತನ್ನ ಬೈಕಿನಲ್ಲಿ ಸಾಗುತ್ತಿದ್ದ. ಮಂತ್ರಿ ಆಲ್ಫೈನ್ ಅಪಾರ್ಟ್ಮೆಂಟ್ ಬಳಿ ಸಾಗುತ್ತಿದ್ದ ವೇಳೆ ಮೈಸೂರು ರಸ್ತೆ ಉತ್ತರಹಳ್ಳಿ ಮಾರ್ಗದ ಬಸ್ ಓವರ್ ಟೇಕ್ ಮಾಡಲು ಯತ್ನಿಸಿದಾಗ ಟಚ್ ಆಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್‌ನ ಬಲ ಹಿಂಭಾಗದ ಚಕ್ರ ತೇಜಸ್ ಮೇಲೆ ಹರಿದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ (ಪ್ರತ್ಯೇಕ ಘಟನೆ) : ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಶುಕ್ರವಾರ (5-1-24) ಬೆಳಗ್ಗೆ ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ನಡೆದಿತ್ತು. ಮೃತರನ್ನು ಇಳಂಗೋವನ್ ಸೆಂಕತ್ತವಲ್ (43) ಮೃತ ಸವಾರ ಎಂದು ತಿಳಿದುಬಂದಿತ್ತು.
ಮೃತ ಇಳಂಗೋವನ್ ಅವರು ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರು ಮಾರ್ಗವಾಗಿ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿತ್ತು. ಪರಿಣಾಮ ನೆಲಕ್ಕೆ ಬಿದ್ದ ಇಳಂಗೋವನ್ ತಲೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದ್ದವು. ಗಾಯಗೊಂಡಿದ್ದ ಅವರನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಎಚ್ಎಎಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಕುಂದಗೋಳ ಬಳಿ ಸರಣಿ ಅಪಘಾತ : ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇತರೆ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಬಳಿ ಶನಿವಾರ ಬೆಳಗ್ಗೆ ನಡೆದಿತ್ತು. ಮೃತರನ್ನು ಹಾಸನ ಜಿಲ್ಲೆಯ ಅರಕಲಗೂಡಿನ ಮಣಿಕಂಠ (26), ಪವನ್ (23), ಚಂದನ್ (31) ಹಾಗೂ ಹರೀಶ್ (34) ಎಂದು ಗುರುತಿಸಲಾಗಿತ್ತು.
ಬೆಂಗಳೂರಿನಿಂದ ಶಿರಡಿ ಹಾಗೂ ಗೋವಾಕ್ಕೆ ಹೊರಟಿದ್ದ ಕಾರುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಎರಡೂ ಕಾರಿನಲ್ಲಿದ್ದ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆಗ ಇಬ್ಬರನ್ನು ಆಂಬ್ಯುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನುಳಿದ ನಾಲ್ಕು ಜನರು ರಸ್ತೆ ಪಕ್ಕದಲ್ಲಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ಹಾವೇರಿ ಕಡೆಯಿಂದ ಬಂದ ಲಾರಿಯು ಅಪಘಾತವಾಗಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನ ಪಕ್ಕದಲ್ಲೇ ನಿಂತಿದ್ದ ನಾಲ್ವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ: ಸವಾರ ಸಾವು