ಬೆಂಗಳೂರು: ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ನಿರಂತರವಾಗಿ ಆತ್ಯಾಚಾರವೆಸಗಿದ್ದಲ್ಲದೆ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪ್ರಿಯತಮೆವೋರ್ವಳು ಪ್ರಿಯಕರ ಹಾಗೂ ಆತನ ಮನೆಯವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಶಾಲಾ ದಿನಗಳಿಂದ ಸ್ನೇಹಿತನಾಗಿದ್ದ ಆರೋಪಿ ರವಿಚಂದ್ರ ಹಾಗೂ ಸಂತ್ರಸ್ತೆ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗ್ತಿದೆ. ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಆತ್ಯಾಚಾರ ಎಸಗಿದ್ದ. ಬಳಿಕ ಹೊರ ಜಗತ್ತಿಗೆ ಹೆಂಡತಿ ಎಂದು ಹೇಳಿ ಕಾಲ ಮುಂದೂಡುತ್ತಿದ್ದ. ಬಳಿಕ ಏಕಾಏಕಿ ಸಂತ್ರಸ್ತೆ ಮನೆಗೆ ಬಂದು ರವಿಚಂದ್ರ ಮನೆಯವರು ಕ್ಯಾತೆ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಸಂತ್ರಸ್ತೆ ಫೆಬ್ರವರಿ 20ರಂದು ಪ್ರಿಯತಮನ ಮನೆಗೆ ತೆರಳಿ ಮದುವೆಯಾಗು ಎಂದು ಒತ್ತಡ ಹೇರಿದಾಗ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪ್ರಿಯಕರ ರವಿಚಂದ್ರ, ಭಾವ ದೇವರಾಜ್, ಅಕ್ಕ ಸೇರಿದಂತೆ ಆತನ ಮನೆಯವರ ವಿರುದ್ಧ ಯುವತಿ ಚಂದ್ರಾಲೇಔಟ್ ಪೊಲೀಸರಿಗೆ ದೂರು ನೀಡಿದ್ದಾಳೆ.
ಯುವತಿ ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.