ಬೆಂಗಳೂರು: ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿಯನ್ನು ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ಸಿಬಿಐ ಕಚೇರಿಯಲ್ಲಿ ಎಸ್ ಪಿ ಥಾಮ್ಸನ್ ಜೋಸ್ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದೆ.
ಜೂನ್ 15, 2016 ರಂದು ಧಾರವಾಡದಲ್ಲಿ ಜಿ.ಪಂ. ಸದಸ್ಯ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲೆ ಆರೋಪ ಕೇಳಿ ಬಂದ ಕಾರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲಾಗಿತ್ತು. ನಂತರ ಬಿಎಸ್ ವೈ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು.
ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳಿಗೆ ರಾಜ್ಯ ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ಜೊತೆ ಕೈಜೋಡಿಸಿರುವುದು ತಿಳಿದು ಬಂದಿತ್ತು. ಸದ್ಯ 7 ಮಂದಿ ಪೊಲೀಸರಿಗೂ ಬಂಧನದ ಭೀತಿ ಎದುರಾಗಿದ್ದು, ಅದರಲ್ಲಿ ಓರ್ವ ಅಧಿಕಾರಿ ನಿವೃತ್ತಿ ಹೊಂದಿದ್ದಾರೆ. ಉಳಿದ 6 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆ, ಫೋನ್ ಕರೆಯ ಮಾಹಿತಿ ಡಿಟೇಲ್ಸ್, ಕೆಲ ಸಿಸಿಟಿವಿ ದೃಶ್ಯಗಳು, ಸಾಂದರ್ಭಿಕ ಸಾಕ್ಷಿಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇಂದು ವಿಜಯ್ ಕುಲಕರ್ಣಿ ವಿಚಾರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.