ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿ ಹಾಗೂ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ 9ರವರೆಗೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆಯಿದೆ. ಒಟ್ಟು 19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 11ರವರೆಗೆ ಹೆಚ್ಚು ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಯೆಲ್ಲೊ ಅಲರ್ಟ್ ಮುಂದುವರಿಸಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಅಕ್ಟೋಬರ್ 9ರ ನಂತರ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ ರಾಜ್ಯ ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.
19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್:
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಒಳನಾಡಾದ ತುಮಕೂರು, ಶಿವಮೊಗ್ಗ, ಕೋಲಾರ, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಬೀದರ್, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಅಡಿಗ ಹೇಳಿದ್ದಾರೆ.
ಬುಧವಾರ ಗರಿಷ್ಠ 8 ಸೆ.ಮೀ ಮಳೆ:
ಬುಧವಾರ ಉತ್ತರ ಕನ್ನಡ ಜಿಲ್ಲೆಯ ಜಗಲ್‌ಬೆಟ್ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಲಾ 8 ಸೆ.ಮೀ ಗರಿಷ್ಠ ಮಳೆಯಾಗಿದೆ. ಮಂಗಳೂರು, ಅರಕಲಗೂಡು 6, ಕುಣಿಗಲ್ 5, ಗದಗ, ನೆಲಮಂಗಲ, ಭದ್ರಾವತಿ, ಬೆಂಗಳೂರು ನಗರ 4, ಬೆಳ್ತಂಗಡಿ, ಬೆಳಗಾವಿ, ಚಿಕ್ಕಮಗಳೂರು, ಮಾಗಡಿ, ಚಿಂತಾಮಣಿ, ಸಕಲೇಶಪುರ, ಗೌರಿಬಿದನೂರು, ಹೊಸಕೋಟೆ 3, ಪುತ್ತೂರು, ವಿಜಯಪುರ, ಶಿವಮೊಗ್ಗ, ಕೋಲಾರ, ಹಾಸನ, ಕೆ.ಆರ್.ಪೇಟೆ, ತಿಪಟೂರು, ಮಧುಗಿರಿ, ಮದ್ದೂರು, ಬೇಲೂರು 2, ಉಡುಪಿ, ಅಥಣಿ, ಕಡೂರು, ಶಿಡ್ಲಘಟ್ಟ, ಮಡಿಕೇರಿ, ಚಿತ್ರದುರ್ಗದಲ್ಲಿ ತಲಾ 1 ಸೆ.ಮೀ ಮಳೆ ಸುರಿದಿದೆ ಎಂದು ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
ಕಲಬುರಗಿಯಲ್ಲಿ ಗರಿಷ್ಠ ತಾಪಮಾನ:
ಕಲಬುರಗಿಯಲ್ಲಿ 33.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಬೀದರ್‌ನಲ್ಲಿ 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರೆಗೆ ಎಸ್.ಎಂ.ಕೃಷ್ಣ ಚಾಲನೆ