ಬೆಂಗಳೂರು: ರಾಜ್ಯಾದ್ಯಂತ ಹಲವು ದಿನಗಳಿಂದ ಇಳಿಮುಖವಾಗಿದ್ದ ಮಳೆಯ ಪ್ರಮಾಣ ಇಂದು ಮತ್ತೆ ಏರಿಕೆಯಾಗಿದೆ. ನಾಳೆಯಿಂದ ಆ 8ರ ವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 6 ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಾಳೆ ಮತ್ತು ನಾಡಿದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು ನೈರುತ್ಯ ಮುಂಗಾರು ಚುರುಕಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಹಲವೆಡೆ ಭಾರಿ ಮಳೆ: ಉಡುಪಿಯ ಸಿದ್ದಾಪುರ ಮತ್ತು ಶಿವಮೊಗ್ಗದ ಆಗುಂಬೆಯಲ್ಲಿ ತಲಾ 15 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ 13 ಸೆಂ.ಮೀ, ಶಿವಮೊಗ್ಗದ ತುಮರಿಯಲ್ಲಿ 12 ಸೆಂ.ಮೀ, ಶಿರಾಲಿಯಲ್ಲಿ 10 ಸೆಂ.ಮೀ, ಲಿಂಗನಮಕ್ಕಿ, ತೀರ್ಥಹಳ್ಳಿ, ಭಟ್ಕಳ, ಕೋಟದಲ್ಲಿ ತಲಾ 9 ಸೆಂ.ಮೀ, ಹೊನ್ನಾವರ, ಉತ್ತರ ಕನ್ನಡದ ಸಿದ್ದಾಪುರ, ಮಂಕಿ, ತಾಳಗುಪ್ಪ, ಚಿಕ್ಕಮಗಳೂರಿನ ಜಯಪುರ ಹಾಗೂ ಕೊಡಗಿನ ಸಂತಹಳ್ಳಿಯಲ್ಲಿ ತಲಾ 7 ಸೆಂ.ಮೀ, ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಅರವಿಂದ್ ಬೆಲ್ಲದ್ಗೆ ತಪ್ಪಿದ ಸಚಿವ ಸ್ಥಾನ: ಧಾರವಾಡದಲ್ಲಿ ಬೆಂಬಲಿಗರ ಪ್ರತಿಭಟನೆ