ಬೆಂಗಳೂರು: ''ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಇಡೀ ದೇಶವೇ ಎದುರು ನೋಡುತ್ತಿದೆ. ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವುದಿಲ್ಲ. ಆದರೆ, ತಿಂಗಳೊಳಗೆ ಸ್ನೇಹಿತರೊಂದಿಗೆ ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಮಾಡುತ್ತೇನೆ'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅರಮನೆ ಮೈದಾನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಎಲ್ಲಾ ಕಡೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದೆ. ಬಹಳ ಅದ್ದೂರಿಯಾಗಿ ಯಾವುದೇ ಅಡೆ ತಡೆ ಇಲ್ಲದೆ ಕಾರ್ಯಕ್ರಮ ನಡೆಯುತ್ತದೆ ಎನ್ನುವ ವಿಶ್ವಾಸವಿದೆ. ಆ ಕ್ಷಣಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಪ್ರಧಾನಿ ಮೋದಿ ಎರಡು ದಿನ ಮೊದಲೇ ಅಲ್ಲಿದ್ದು, ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ'' ಎಂದು ತಿಳಿಸಿದರು.
ಒಳಮೀಸಲಾತಿ ವಿಚಾರ: ಸರ್ಕಾರ ಒಳ ಮೀಸಲಾತಿ ಸಂಬಂಧಿಸಿದಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ''ಕಾನೂನು, ಸಂವಿಧಾನ ಪ್ರಕಾರವಾಗಿ ಬೊಮ್ಮಾಯಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಿದೆ. ಮುಂದೆ ಏನಾದರೂ ನಮ್ಮ ಜವಾಬ್ದಾರಿ ಇದ್ದರೆ ಮಾಡುತ್ತೇವೆ. ಸರ್ಕಾರ ಏನು ಪ್ರಸ್ತಾವನೆ ಕೊಟ್ಟಿದೆಯೋ ಅದನ್ನು ನೋಡಿ ನಾವು ತೀರ್ಮಾನ ಮಾಡಬೇಕಾಗುತ್ತದೆ'' ಎಂದರು.
ಇದನ್ನೂ ಓದಿ: ಬದ್ಧತೆ ಇದ್ದರೆ ಸದಾಶಿವ ಆಯೋಗದ ವರದಿ ಜಾರಿ ಮಾಡಿ: ಸರ್ಕಾರಕ್ಕೆ ಬೊಮ್ಮಾಯಿ ಆಗ್ರಹ