ಬೆಂಗಳೂರು: ವಿರೋಧ ಪಕ್ಷದ ನಾಯಕರ ಆಯ್ಕೆ ತಡ ಆಗಿದೆ, ಆದಷ್ಟು ಬೇಗ ಮಾಡಲು ಹೈಕಮಾಂಡ್ಗೆ ಹೇಳಿದ್ದೇನೆ. ಮತ್ತೆ ಈ ಬಗ್ಗೆ ಒತ್ತಡವನ್ನೂ ಹೇರುತ್ತೇನೆ, ನೂರಕ್ಕೆ ನೂರು ಅಧಿವೇಶನಕ್ಕೆ ಮೊದಲು ನೇಮಕ ಮಾಡಲು ಹೇಳಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಸೇರಿ ಹಲವರ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡುತ್ತ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಯಾರನ್ನಾದರೂ ಮಾಡಲಿ, ಆದಷ್ಟು ಬೇಗ ಮಾಡಲಿ ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ. ಎಲ್ಲರಂತೆ ನಾನೂ ಕೂಡ ಆದಷ್ಟು ಬೇಗ ಆಯ್ಕೆ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಸಿಎಂ ಹೇಳಿಕೆಗೆ ತಿರುಗೇಟು: ಪ್ರತಿನಿತ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಗುರ ಹೇಳಿಕೆ ನೀಡುತ್ತಿದ್ದರೆ, ನಿಮ್ಮನ್ನು ಯಾರು ಹತ್ತಿರ ಬಿಟ್ಟುಕೊಳ್ಳುತ್ತಾರೆ?. ದೆಹಲಿಗೆ ಹೋಗಿ ಕುಳಿತು ಪ್ರಧಾನಿಗಳ ಸಮಯಾವಕಾಶ ಪಡೆದು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಕೇಂದ್ರದ ನಾಯಕರು ಸಮಯಾವಕಾಶ ನೀಡುತ್ತಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ, ಸರ್ಕಾರದ ಚಕ್ರದಲ್ಲಿ ಗಾಳಿ ಇಲ್ಲದೆ ಮುಂದೆ ಸಾಗುತ್ತಿಲ್ಲ. ಅಪಾರ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಸಿದ್ದರಾಮಯ್ಯ ಪಕ್ಷ, ಸರ್ಕಾರದ ಮೇಲೆ ಹಿಡಿತ ಇಲ್ಲದ ಸ್ಥಿತಿಯಲ್ಲಿದ್ದಾರೆ. ಶಕ್ತಿ ಯೋಜನೆ ಬಿಟ್ಟು ಉಳಿದ ಯಾವುವೂ ಸಫಲವಾಗಿಲ್ಲ, ಬರೀ ಉಚಿತ ಯೋಜನೆಗಳಿಗೆ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಯತ್ನಿಸುತ್ತಿದ್ದಾರೆ. ಉಚಿತ ಎಂದು ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಬರಪೀಡಿತ ಪ್ರದೇಶಗಳಿಗೆ ಯಾವೊಬ್ಬ ಸಚಿವನೂ ಹೋಗಿಲ್ಲ ಎಂದು ಆರೋಪಿಸಿದರು.
ಕಾವೇರಿ ನೀರು ವಿಚಾರದಲ್ಲಿ ವಿಫಲ: ಗೃಹಲಕ್ಷ್ಮಿ ಯೋಜನೆ ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ, ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ. ಐಟಿ ದಾಳಿ ವೇಳೆ ಸಿಕ್ಕ ನೂರು ಕೋಟಿಗೂ ಹೆಚ್ಚಿನ ಹಣದಿಂದ ಇವರ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದ ತಿಕ್ಕಾಟ ತಾರಕಕ್ಕೇರಿದೆ. ಡಿಸಿಎಂ ಉಪಟಳ ಕಡಿವಾಣಕ್ಕೆ ಡಿನ್ನರ್ ಮೀಟಿಂಗ್ ಆರಂಭವಾಗಿದೆ. ಕಾವೇರಿ ನ್ಯಾಯಮಂಡಳಿಯ ಮುಂದೆ ಸಮರ್ಥ ವಾದ ಮಂಡಿಸಲು ವಿಫಲವಾಗಿದ್ದು, ಎರಡು ತಿಂಗಳಿನಿಂದ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದಲ್ಲಿ ಸಮಸ್ಯೆ ಉಂಟು ಮಾಡಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಕೇಂದ್ರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ನಾಯಕರಾದ ವೇಣುಗೋಪಾಲ್, ಸುರ್ಜೇವಾಲಾ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಕಾಂಗ್ರೆಸ್ ಸರ್ಕಾರ ಅವರಿಗೆ ಎಟಿಎಂ ಆಗಿದೆ. ಚುನಾವಣಾ ಟಾರ್ಗೆಟ್ ನೀಡಲು ಅವರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಸುರ್ಜೇವಾಲಾ, ವೇಣುಗೋಪಾಲ್ ಬಂದು ಶಾಸಕರು ಸಚಿವರ ಸಭೆ ಮಾಡಿದ್ದಾರೆ. ಇದರ ಅರ್ಥ ಬೆಳಗ್ಗೆ ಎದ್ದ ಕೂಡಲೇ ನಿತ್ಯ ನಾಯಿ ನರಿಯಿಂತೆ ಕಚ್ಚಾಡುತ್ತಿದ್ದಾರೆ, ಅದನ್ನು ಸರಿಪಡಿಸಿಕೊಳ್ಳಲಿ ಎಂದು ಟೀಕಿಸಿದರು.
ಸಿದ್ದರಾಮಯ್ಯರಿಗೆ ಮಾಹಿತಿ ಕೊರತೆ: ಕೇಂದ್ರ ರಾಜ್ಯಕ್ಕೆ ಅನುದಾನದ ಕೊಟ್ಟಿದ್ದು, ಸಿಎಂಗೆ ಮಾಹಿತಿ ಕೊರತೆ ಇರಬಹುದು. ಎನ್ಡಿಆರ್ ಅಡಿ 12,784 ಕೋಟಿ, ಎನ್ಡಿಆರ್ಎಫ್ ಅಡಿ 3,377 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದ ಯೋಜನೆ ಹೊರತುಪಡಿಸಿ 5.23 ಲಕ್ಷ ಕೋಟಿ ಕೊಟ್ಟಿದ್ದಾರೆ. 37,510 ಕೋಟಿ ಹಣ ರಾಷ್ಟ್ರೀಯ ಹೆದ್ದಾರಿಗೆ, 42,262 ಕೋಟಿ ಮೌಲ್ಯದ ಯೋಜನೆ ಚಾಲನೆಯಲ್ಲಿದೆ. ಎಕ್ಸ್ಪ್ರೆಸ್ ವೇ ಸಿದ್ಧವಾಗುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ನಡಿ 20 ಸಾವಿರ ಕೋಟಿ, ರಸಗೊಬ್ಬರ ಸಹಾಯಧನ 19,567 ಕೋಟಿ, ಭದ್ರಾ ಯೋಜನೆಗೆ 5,300 ಕೋಟಿ, ರೈಲ್ವೆ ಯೋಜನೆಗೆ 1,727 ಕೋಟಿ, ಉಪನಗರ ರೈಲು ಯೋಜನೆಗೆ 450 ಕೋಟಿ ನೀಡಲಾಗಿದೆ. ಮೆಟ್ರೋ ಯೋಜನೆಗೂ ಹಣ ನೀಡಲಾಗುತ್ತಿದೆ. ಮೋದಿ ಯಾವುದೇ ತಾರತಮ್ಯ ಮಾಡದೆ ಅನುದಾನ ನೀಡಿದ್ದಾರೆ. ಆದರೆ ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ನಿತ್ಯ ಮೋದಿ ಅವರನ್ನು ಟೀಕಿಸುತ್ತಿದ್ದಾರೆ ಎಂದರು.
ಜೆಡ್ ಭದ್ರತೆ ಬೇಡ: ನನಗೆ ಜೆಡ್ ಭದ್ರತೆ ಬೇಡ ಎಂದು ನಾನು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ನಾನು ಜನರ ನಡುವೆ ಇರುವವನು, ಜೆಡ್ ಭದ್ರತೆಯಿದ್ದರೆ ನನ್ನ ಅಕ್ಕಪಕ್ಕ ಯಾರೂ ಬರಲಾಗಲ್ಲ. ಹಾಗಾಗಿ ಮೊದಲಿದ್ದ ಭದ್ರತೆ ಸಾಕು ಎಂದಿದ್ದೇನೆ. ನಾಳೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಮೈಸೂರು ರಾಜರು ಭೇಟಿ ನೀಡುತ್ತಿರುವ ಕಾರಣದಿಂದಾಗಿ ಅಲ್ಲಿಗೆ ಹೋಗುತ್ತಿದ್ದೇನೆ. ಹಾಗಾಗಿ ನಾಳೆಯಿಂದ ಆಗಬೇಕಿದ್ದ ಬರ ಅಧ್ಯಯನ ಪ್ರವಾಸವನ್ನು 5ರಿಂದ ಆರಂಭಿಸಲಿದ್ದೇವೆ. ಈಗ ಮೇಘಾಲಯ, ಜಮ್ಮು ಕಾಶ್ಮೀರಕ್ಕೆ ಕೆಲ ನಾಯಕರು ತೆರಳಿದ್ದು ಅವರೂ ಕೂಡ ವಾಪಸ್ಸಾದ ನಂತರ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದರು.
ಆಪರೇಷನ್ ಕಮಲ ಆರೋಪಕ್ಕೆ ವಾಗ್ದಾಳಿ: ತಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಹಣದ ಆಮಿಷ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ಬದಲು ಸಾಕ್ಷಿ ಇದ್ದರೆ ತನಿಖೆ ನಡೆಸಿ, ವಿನಾಕಾರಣ ನಿಮ್ಮ ತಪ್ಪು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಆರೋಪ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ರೈತರ ಪಂಪ್ಸೆಟ್ಗಳಿಗೆ 10 ಹೆಚ್ಪಿವರೆಗೂ ಯಡಿಯೂರಪ್ಪ ಸರ್ಕಾರದಲ್ಲಿ ಉಚಿತ ವಿದ್ಯುತ್ ಕೊಡಲಾಗುತ್ತಿತ್ತು, 10 ಗಂಟೆ ತ್ರೀ ಫೇಸ್ ನೀಡಲಾಗುತ್ತಿತ್ತು. ಈಗ ಎರಡು ಗಂಟೆಗೆ ಇಳಿಸಿರುವ ಕಾರಣಕ್ಕೆ ಬೆಳೆ ಒಣಗಿದೆ. ಇದಕ್ಕೆ ಪರಿಹಾರ ನೀಡಬೇಕು, ಇದರ ಜೊತೆಗೆ ಈಗ ಪಂಪ್ ಸೆಟ್ಗೆ ವಿದ್ಯುತ್ ಕನೆಕ್ಷನ್ ಪಡೆಯಲು 2 ಲಕ್ಷ ಹಣ ಕೊಡಬೇಕಿದೆ. ಇಷ್ಟು ಹಣ ಯಾರಿಗೆ ಕೊಡಲು ಸಾಧ್ಯ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
ಇದನ್ನೂ ಓದಿ: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಯನ ಪ್ರವಾಸ: ಗುವಾಹಟಿಗೆ ಹೊರಟ ರಾಜ್ಯದ ನಾಯಕರು