ಬೆಂಗಳೂರು: ಗವಿಗಂಗಾಧರ ದೇಗುಲದಲ್ಲಿ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾರುದ್ರಯಾಗ ಮಾಡಲು ನಿರ್ಧರಿಸಿದ್ದು, ದೇಗುಲದ ಹೊರಭಾಗದಲ್ಲಿ ಹೋಮಕ್ಕೆ ಸಜ್ಜುಗೊಳಿಸಲಾಗಿದೆ.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ ಆರಂಭಗೊಂಡಿದೆ. ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸಂಕಲ್ಪದಂತೆ ಯಾಗ ಆಯೋಜನೆ ಮಾಡಿದ್ದು ಬಿಎಸ್ವೈ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಚಂದ್ರಗ್ರಹಣ ಮೋಕ್ಷಕಾಲದಲ್ಲಿ ಗವಿಗಂಗಾಧರ ದೇಗುಲದಲ್ಲಿ ದೇಗುಲ ಸ್ವಚ್ಛತಾ ಕಾರ್ಯ ಪ್ರಕಾರ ಶುದ್ಧಿಗೊಳಿಸಲಾಗಿದ್ದು, ಇಡೀ ದೇಗುಲವನ್ನು ಶುಚಿಗೊಳಿಸಿ ಪೂಜೆಗೆ ಸಜ್ಜುಗೊಳಿಸಲಾಗಿದೆ.
ಹೋಮ ಕಾರ್ಯಕ್ರಮದಲ್ಲಿ ಬಿಎಸ್ ವೈ ಪುತ್ರಿ ಪದ್ಮಾವತಿ, ಸೊಸೆ ಪ್ರೇಮಾ, ಮೊಮ್ಮಗ, ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ರವಿಸುಬ್ರಮಣ್ಯ ಮತ್ತು ಯಡಿಯೂರಪ್ಪ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ. ಇನ್ನೂ ಮೂರು ಗಂಟೆ ಕಾಲ ಹೋಮ ನಡೆಯಲಿದ್ದು ಇನ್ನು ಕೆಲವೇ ಕ್ಷಣಗಳಲ್ಲಿ ಯಡಿಯೂರಪ್ಪ ಹೋಮ ಸ್ಥಳ ತಲುಪಲಿದ್ದಾರೆ.
ಸಹಾಯಕ ಅರ್ಚಕ ಶ್ರೀಕಂಠ ದೀಕ್ಷಿತ್ ಮಾತನಾಡಿ, ಗ್ರಹಣ ಶಾಂತಿ, ರಾಜಕೀಯ ಸಂಕಲ್ಪ ಮಾಡಿಲ್ಲ, ಲೋಕಕಲ್ಯಾಣ ಎಂದಿದ್ದಾರೆ ಅದಕ್ಕೆ ಸಿದ್ದತೆ ಮಾಡಿದ್ದೇವೆ, ಮಹಾಯಾಗದಿಂದ ಶಿವನು ಅಘೋರ ತತ್ವ ಸಂಹಾರ ಮಾಡಿ, ಶಾಂತಿ ತತ್ವ ಅನುಗ್ರಹ ಮಾಡುತ್ತಾನೆ ಈ ಸಂದರ್ಭದಲ್ಲಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹಾಗೂ ಬಿಎಸ್ವೈಗೆ ಅಧಿಕಾರ ಪ್ರಾಪ್ತಿಯಾಗುವ ಕಾರಣವೂ ಯಾಗದಲ್ಲಿ ಇದೆ ಎಂದು ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.