ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಸಿಎಂ ಜೊತೆ ಸಚಿವರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಅಸಂಬದ್ಧ ಹಾಗೂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕ, ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಪರಿಹಾರ ನೀಡಬೇಕೆಂಬ ನಿಜವಾದ ಬದ್ಧತೆ ಸರ್ಕಾರಕ್ಕೆ ಇಲ್ಲ. ಹಿಂದೆಂದೂ ಕಂಡರಿಯದ ಪ್ರವಾಹ ಎದುರಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಕಾರ್ಯ ಕೈಗೊಂಡಿಲ್ಲ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತಿಲ್ಲ. ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕೊಯ್ನಾ ಜಲಾಶಯದಿಂದ 6.5 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ ಹರಿದಿದ್ದು, ಪ್ರವಾಹದಿಂದ ಲಕ್ಷಾಂತರ ಮನೆಗಳು ಕೊಚ್ಚಿ ಹೋಗಿವೆ. ನಾವು ಸಹ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪರಿಹಾರಕ್ಕೆ ಮನವಿ ಮಾಡಿದ್ದರು ಸಹ ಸರ್ಕಾರ ಇನ್ನೂ ಗಮನಹರಿಸಿಲ್ಲ ಎಂದು ದೂರಿದರು.
ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸದಿದ್ದರೆ ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ. ಇದಕ್ಕೆ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕು. ಮತ್ತೆ ಮಳೆ ಸುರಿಯುತ್ತಿದ್ದು, ಒಂದು ಮಗು ಮೃತಪಟ್ಟಿದೆ. ಇದರ ಬಗ್ಗೆ ನಾವು ಸಿದ್ದರಾಮಯ್ಯ ಬಳಿ ಮಾತನಾಡಿದ್ದೇವೆ ಎಂದರು.