ಬೆಂಗಳೂರು: ದೊರೆಸ್ವಾಮಿ ವಿರುದ್ಧದ ಹೇಳಿಕೆಯನ್ನು ನಾನು ಹಿಂಪಡೆಯಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡುತ್ತೇನೆ. ಆದರೆ ನಕಲಿ ಹೋರಾಟಗಾರರಿಗೆ ಗೌರವ ಕೊಡಲ್ಲ ಎಂದು ಮತ್ತೆ ದೊರೆಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಅವರ ಹೋರಾಟದ ಬಗ್ಗೆ ತನಿಖೆಯಾಗಲಿ. ಅವರು ಬ್ರಿಟಿಷ್ ಲಾಟಿ, ಬೂಟಿನ ಏಟು ತಿಂದಿದ್ದಾರಾ? ಕಾಲಾಪಾನಿ ಶಿಕ್ಷೆ ಅನುಭವಿಸಿದ್ದಾರಾ? ಎಷ್ಟು ಸಲ ದೊರೆಸ್ವಾಮಿ ಜೈಲಿಗೆ ಹೋಗಿ ಬಂದಿದ್ದಾರೆ. ಸರ್ಜಿಕಲ್ ಸ್ಟ್ರೈಕ್ಗೆ ಸಾಕ್ಷಿ ಕೇಳುತ್ತಾರಲ್ಲ, ಹಾಗೇ ಇದಕ್ಕೂ ನಾನು ಸಾಕ್ಷಿ ಕೇಳುತ್ತೇನೆ ಎಂದರು.
ಕಾಂಗ್ರೆಸ್ಗೆ ಮಾಡಲು ಕೆಲಸವಿಲ್ಲ. ಹೀಗಾಗಿ ನನ್ನ ವಿರುದ್ಧ ಹೋರಾಟ ಮಾಡುತ್ತಿದೆ. ಆರ್ಎಸ್ಎಸ್ ನನ್ನ ಬಾಯಿಂದ ಹೇಳಿಸಿಲ್ಲ. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದೆ. ಹೀಗೆಯೇ ಆದರೆ ಜೀರೋ ಆಗ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಳಿನ್ ಕುಮಾರ್ ಕಟೀಲ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾಕೆ ವಿರೋಧಿಸುತ್ತಾರೆ ಎಂದು ಗೊತ್ತಿದೆ. ಅವರ ಬಗ್ಗೆ ಮುಂದೆ ಎ ಸ್ಕೀಂ, ಬಿ ಸ್ಕೀಂನಲ್ಲಿ ಮಾತನಾಡುತ್ತೇನೆ ಎಂದರು.