ಬೆಂಗಳೂರು : ಲಿಂಗಾಯತ ವೀರಶೈವ ಧರ್ಮ ವಿಭಜನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಸಭೆಯಲ್ಲಿ ಬಿಎಸ್ ವೈ ಭಾಗಿ: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಪ್ರಾರಂಭಿಸಿದ್ದು, ಚುನಾವಣಾ ತಂತ್ರಗಾರಿಕೆ ರೂಪಿಸಲು ಮಾಜಿ ಸಿಎಂ ಬಿ.ಎಸ್.ವೈ ಅಖಾಡಕ್ಕಿಳಿದಿದ್ದಾರೆ. ಮೊನ್ನೆಯಷ್ಟೇ ಎರಡು ಉನ್ನತ ಸ್ಥಾನಗಳಿಗೆ ನೇಮಕವಾಗಿದ್ದ ಯಡಿಯೂರಪ್ಪ, ಇಂದು ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಭಾಗಿಯಾದರು.
ಇದನ್ನೂ ಓದಿ : ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ಸತ್ಯ ಇಡೀ ಜಗತ್ತಿಗೆ ಗೊತ್ತು: ಸಿಎಂ ಬೊಮ್ಮಾಯಿ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, 2018ರಲ್ಲಿ ಪರಾಜಿತಗೊಂಡ ಅಭ್ಯರ್ಥಿಗಳ ಜತೆ ಕಟೀಲ್, ಯಡಿಯೂರಪ್ಪ ಅವರು ಸಮಾಲೋಚನೆ ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿ, ಸಾಮರ್ಥ್ಯ, ಮುಂದಿನ ತಂತ್ರಗಾರಿಕೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಯುತ್ತಿದೆ.
ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿ: ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಿಎಂ ಬೊಮ್ಮಾಯಿ ಕೂಡ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಜಿ. ವಿ., ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಎನ್. ರವಿಕುಮಾರ್, ಸಿದ್ದರಾಜು, ಪದಾಧಿಕಾರಿಗಳು ಮತ್ತು ಇತರರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ಯಾವ ಪಶ್ಚಾತ್ತಾಪವೂ ಇಲ್ಲ, ಧರ್ಮ ಒಡೆಯುವ ಉದ್ದೇಶ ಇರಲಿಲ್ಲ ಎಂದು ಶ್ರೀಗೆ ವಿವರಣೆ ಕೊಟ್ಟಿದ್ದೇನಷ್ಟೆ: ಸಿದ್ದರಾಮಯ್ಯ ಸ್ಪಷ್ಟನೆ