ಬೆಂಗಳೂರು: ಪೌಷ್ಟಿಕಾಂಶಗಳ ಕಣಜ, ಬಾಣಂತಿಯರ ಅಚ್ಚುಮೆಚ್ಚಿನ ಸಿಹಿ ತಿನಿಸು, ಅಮೀನಗಡದ ಸುಪ್ರಸಿದ್ಧ ವಿಜಯಾ ಕರದಂಟು ತನ್ನ ನಾಲ್ಕನೇ ಮಳಿಗೆಯನ್ನು ಜಯನಗರದಲ್ಲಿ ಆರಂಭಿಸಿದೆ. ಶಾಸಕಿ ಸೌಮ್ಯಾರೆಡ್ಡಿ ಮಳಿಗೆಗೆ ಚಾಲನೆ ನೀಡಿ, ಇದೇ ಮೊದಲ ಬಾರಿಗೆ ತಯಾರಿಸಿದ ವಿಶ್ವದ ಅತಿ ದೊಡ್ಡ 1000 ಕೆಜಿ ತೂಕದ ಕರದಂಟನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ 'ಯಾವ ಮಾಡ್ಯಾನ ಬಂಟ, ತಿಂದಷ್ಟು ರುಚಿ ಉಂಟ ಅಮೀನಗಡ ಕರದಂಟ' ಎನ್ನುವ ಗಾದೆಗೆ ತಕ್ಕಂತೆ ಇದು ರುಚಿಯ ಜೊತೆಗೆ ಪುಷ್ಟಿ ನೀಡುವ ಡ್ರೈ ಫ್ರುಟ್ಗಳಿಂದ ಮಾಡಿರುವುದರಿಂದ ಬಾಣಂತಿಯರು ಸೇರಿದಂತೆ ದಷ್ಟಪುಷ್ಟ ದೇಹಸಿರಿ ಹೊಂದುವ ಪ್ರತಿಯೊಬ್ಬರಿಗೂ ಇದು ಅತ್ಯುಪಯುಕ್ತವಾಗಿದೆ ಎಂದು ಹೇಳಿದರು.
ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕು ವರ್ಷಗಳ ಹಿಂದೆ ಮೊದಲ ಮಳಿಗೆ ಆರಂಭಿಸಿದ್ದೆವು. ಜಯನಗರದಲ್ಲಿ ನಾಲ್ಕನೇ ಮಳಿಗೆಗೆ ಚಾಲನೆ ನೀಡಿದ್ದೇವೆ. ಗ್ರಾಹಕರ ಬೇಡಿಕೆಯನ್ನಾಧರಿಸಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರತಿಷ್ಠಿತ ಪ್ರದೇಶಗಳಲ್ಲಿ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ವಿಜಯಾ ಕರದಂಟು ಮಾಲೀಕ ಸಂತೋಷ್ ಐಹೊಳ್ಳಿ ಹೇಳಿದರು.
ಕರದಂಟು ನೋಡಲು ದೌಡಾಯಿಸುತ್ತಿರುವ ಜನ: ಗೋಡಂಬಿ, ಬಾದಾಮಿ, ಪಿಸ್ತಾ, ಒಣದ್ರಾಕ್ಷಿ, ಅಂಜೂರ್ ಸೇರಿದಂತೆ ವಿವಿಧ ಒಣ ಹಣ್ಣಗಳನ್ನು ಉಪಯೋಗಿಸಿ 80 ಜನ ಬಾಣಸಿಗರು ಸೇರಿ ಮೂರು ದಿನಗಳಲ್ಲಿ ತಯಾರಿಸಿದ 1000 ಕೆ.ಜಿ. ಕರದಂಟನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದು ವಿಶ್ವದ ಅತಿ ದೊಡ್ಡ ಕರದಂಟು ಪ್ರದರ್ಶನ ಎನ್ನುವ ಸಾರ್ವಕಾಲಿಕ ದಾಖಲೆಗೆ ಭಾಜನವಾಗಲಿದೆ. ಮಳಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾದ ಇದನ್ನು ನೋಡಿ ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಪ್ರದೇಶಗಳ ಜನರು ಅಂಗಡಿಗೆ ದೌಡಾಯಿಸುತ್ತಿದ್ದಾರೆ.
10 ದಿನಗಳ ಕಾಲ ಪ್ರದರ್ಶನ: ಜಯನಗರದ 9ನೇ ಬ್ಲಾಕ್‌ನ 41ನೇ ಕ್ರಾಸ್‌ನಲ್ಲಿರುವ ಈ ಸಾವಿರ ಕೆ.ಜಿ. ತೂಕದ ಕರದಂಟು ಮುಂದಿನ 10 ದಿನಗಳ ಕಾಲ ಪ್ರದರ್ಶನಕ್ಕೆ ಇರಲಿದ್ದು, ಕ್ರಿಸ್‌ಮಸ್‌ನ ಪ್ರಮುಖ ಆಕರ್ಷಣೆಯ ತಾಣವಾಗಿ ಪರಿಣಮಿಸಲಿದೆ.
ಇದನ್ನೂ ಓದಿ: 40 ಕೆಜಿ ಬರ್ಗರ್ ತಯಾರಿಸಿ ಫೇಮಸ್ ಆದ ಬರ್ಗರ್ ಚಾಚು... ದಾಖಲೆ ಬರೆದ ಭಾರತದ ಅತಿ ದೊಡ್ಡ ಬರ್ಗರ್