ಬೆಂಗಳೂರು : ಕೊರೊನಾ ಕಾರಣಕ್ಕಾಗಿ ಬಂದ್ ಆಗಿರುವ ಸಾರಾಯಿ, ಮದ್ಯದಂಗಡಿಗಳು ಇನ್ಮುಂದೆಯೂ ಬಾಗಿಲು ತೆಗೆಯದಿರಲಿ. ಸರ್ಕಾರ ಮತ್ತೆ ಇವರಿಗೆ ಮದ್ಯ ಕುಡಿಸಬಾರದು ಎಂದು ಕರ್ನಾಟಕ ರಾಜ್ಯ ಮದ್ಯ ನಿಷೇಧ ಆಂದೋಲನ ಆಗ್ರಹಿಸುತ್ತಿದೆ.
ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಮದ್ಯವ್ಯಸನ ಪಿಡುಗಿನಿಂದ ನರಕಯಾತನೆ ಅನುಭವಿಸುತ್ತಿವೆ. ಇದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕಾಲ್ನಡಿಗೆ ನಡೆಸಿ, ಉಪವಾಸ ಕುಳಿತು ಮದ್ಯವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ನಿಷೇಧಿಸುವಂತೆ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ, ಸರ್ಕಾರ ಮದ್ಯದಿಂದ ಬರುವ ಇಪ್ಪತ್ತು ಸಾವಿರ ಕೋಟಿ ರೂಪಾಯಿ ಆದಾಯದ ನೆಪದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಡೆಗಣಿಸಿತ್ತು. ಇದೀಗ ವೈರಸ್ ಲಾಕ್‌ಡೌನ್ ಕಾರಣದಿಂದ ತಾತ್ಕಾಲಿಕವಾಗಿ ಮದ್ಯ ಮಾರಾಟ ನಿಷೇಧವಿದೆ. ಇದೇ ರೀತಿ ಮುಂದೆಯೂ ಮದ್ಯ ನಿಷೇಧಕ್ಕೆ ನೀತಿ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಮದ್ಯ ನಿಷೇಧ ಆಂದೋಲನ ಒತ್ತಾಯಿಸಿದೆ.
ಕೊರೊನಾ ಬಳಿಕವೂ ಮದ್ಯ ನಿಷೇಧಿಸಲು ಒತ್ತಾಯ.. ಇನ್ನೊಂದೆಡೆ ಅನೇಕ ವೈದ್ಯರು ಮಾನಸಿಕ ತಜ್ಞರು ಕೂಡಾ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಮಾನಸಿಕ ತಜ್ಞರಾದ ಡಾ. ರವೀಶ್ ಹೇಳುವ ಪ್ರಕಾರ 'ಇದೊಂದು ಒಳ್ಳೆಯ ಅವಕಾಶ. 5 ದಿನ ಸಂಭಾಳಿಸಿಕೊಂಡರೆ ನಂತರ ಆ ವ್ಯಕ್ತಿ ವ್ಯಸನಮುಕ್ತನಾಗಬಹುದು. ಸರ್ಕಾರ ಸಮಾಲೋಚನೆ, ಚಿಕಿತ್ಸೆಗಳ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬಹುದು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕರ್ನಾಟಕ ಮದ್ಯ ನಿಷೇಧ ಆಂದೋಲನದ ನೇತೃತ್ವವಹಿಸಿರುವ ಸ್ವರ್ಣ ಭಟ್, ರಾಜ್ಯದಲ್ಲಿ ಆರು ವರ್ಷಗಳಿಂದ ಸಂಪೂರ್ಣವಾಗಿ ಮದ್ಯ ನಿಷೇಧಕ್ಕಾಗಿ ಹೆಣ್ಣುಮಕ್ಕಳು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ನೂರಾರು ಮೈಲಿ ಪಾದಯಾತ್ರೆ ಮಾಡಿ ಒತ್ತಾಯ ಮಾಡಲಾಗಿದೆ. ಆದರೆ, ಮಹಿಳೆಯರ ಸಾಮಾಜಿಕ ಸ್ವಾಸ್ಥ್ಯದ ಹಕ್ಕೊತ್ತಾಯವನ್ನು ಸರ್ಕಾರಗಳು ಕಡೆಗಣಿಸಿ ಅವಮಾನಿಸುತ್ತಲೇ ಬಂದಿವೆ. ತಕ್ಷಣವೇ ಮದ್ಯ ನೀತಿ ರೂಪಿಸಿ ನಿಷೇಧದತ್ತ ಹೆಜ್ಜೆ ಹಾಕಬೇಕು ಎಂದು ಒತ್ತಾಯ ಮಾಡಿದರು.