ಬೆಂಗಳೂರು: ವಿಶ್ವದಾದ್ಯಂತ 121 ನೇ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಆದ್ರೆ ರಾಜ್ಯದಲ್ಲಿ ಈಗಲೂ ಹನಿಟ್ರಾಪ್ ಪ್ರಕರಣಗಳು ಹೆಚ್ಚುತ್ತವೆ. ಮಹಿಳೆಯನ್ನು ಭೋಗದ ವಸ್ತುವಾಗಿ ಕಾಣುವುದನ್ನು ನಿಲ್ಲಿಸಬೇಕಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲಾ ಕೆ.ಎಸ್ ಅಭಿಪ್ರಾಯಪಟ್ಟರು.
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ, ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮಹಿಳಾ ದಿನಾಚರಣೆಗೆ ಐತಿಹಾಸಿಕ ಹಿನ್ನೆಲೆಯಿದೆ. ಗಾರ್ಮೆಂಟ್ಸ್ನಲ್ಲಿ ದುಡಿಯುವ ಮಹಿಳೆಯರು ತಮ್ಮ ಬೇಡಿಕೆ ಮುಂದಿಟ್ಟು ಪಡೆದುಕೊಂಡ ದಿನ ಎಂದು ಒಂದು ಹಿನ್ನೆಲೆಯಿದ್ದರೆ, ಇನ್ನೊಂದೆಡೆ 1857 ರಿಂದಲೇ ದುಡಿಯುವ ಮಹಿಳೆಯರು ಘನತೆಯ ಬದುಕಿನ ಬೇಡಿಕೆಗಾಗಿ ಹೋರಾಟ ಮಾಡಿ, ಮುಂದುವರಿದ ಭಾಗವೇ ಗಾರ್ಮೆಂಟ್ಸ್ ಮಹಿಳೆಯರ ಹೋರಾಟ ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ವಿಶ್ವಯುದ್ಧದ ಸಂದರ್ಭದ ಹೋರಾಟವೂ ಇದೆ.
1975ರಲ್ಲಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಣೆ ಮಾಡಿತು. ಈ ಬಾರಿ ವಿಶ್ವಸಂಸ್ಥೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ದುಡಿದ ಮಹಿಳೆಯರ ಸಾಮರ್ಥ್ಯ ಗುರುತಿಸಬೇಕು ಹಾಗೂ ತಲೆಮಾರಿನ ಸಮಾನತೆಯ ಕಲ್ಪನೆಯನ್ನು ಇಟ್ಟು, ಮಹಿಳಾ ದಿನಾಚರಣೆ ಆಚರಣೆಗೆ ಕರೆ ನೀಡಿದೆ. ತಲೆಮಾರಿನ ಸಮಾನತೆ ಸಾಧಿಸಲು, ಮಹಿಳೆಯರಿಗೆ ಎಲ್ಲ ರೀತಿಯ ಹಕ್ಕುಗಳು, ಅಧಿಕಾರಗಳು ಸಿಗುವ ಹಾಗೆ ವ್ಯವಸ್ಥೆ ಮಾಡಲು ಇಡೀ ಸಮಾಜ ಹಾಗೂ ಸರ್ಕಾರ ಮುಂದಾಗಬೇಕು ಎಂದರು.
ಭಾರತದಲ್ಲಿ ನೋಡಿದಾಗ, ಕೋವಿಡ್ ನಂತರ ದುಡಿಯುವವರ ವರ್ಗ ಸಾಕಷ್ಟು ತೊಂದರೆಗೆ ಸಿಲುಕಿದೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಇಂಧನ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಾಗಿವೆ. ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರವೂ ಹೆಚ್ಚಾಗಿದೆ. ಸರ್ಕಾರಗಳು ಕೂಡಾ ಸಂವಿಧಾನಿಕ ಹಿನ್ನೆಲೆಯಲ್ಲಿ ಕೆಲಸ ಮಾಡುವ ಬದಲು, ಹನಿಟ್ರ್ಯಾಪ್ ನಂತಹ ಪ್ರಕರಣಗಳು, ಹೆಣ್ಣನ್ನು ಭೋಗ ವಸ್ತುವಾಗಿ ಬಳಸುವ ಅಧಿಕಾರ ದಾಹ, ಅಧಿಕಾರಿ ಶಾಹಿಯ ಬಗ್ಗೆ ಕೂಡಾ ಧ್ವನಿಯೆತ್ತಬೇಕಾಗಿದೆ. ನ್ಯಾಯಾಲಯ ಕೂಡಾ ಅತ್ಯಾಚಾರಿಯೊಬ್ಬನಿಗೆ ಮದುವೆ ಮಾಡಿಕೊಡುವಂತಹ ಅವಕಾಶ ನಿರ್ಮಾಣ ಮಾಡಿಕೊಡುತ್ತಿದೆ. ಇದೆಲ್ಲ ವಿಪರೀತದ ಸಂದರ್ಭಗಳು. ಹೆಣ್ಣಿಗೆ ಸಿಗಬೇಕಾದ ಘನತೆ, ಸಮಾನಾವಕಾಶ, ಸಮಾನ ಅಧಿಕಾರ ಸಿಗಬೇಕು ಎಂದು ನಾವೆಲ್ಲ ಪ್ರತಿಜ್ಞೆ ಮಾಡಬೇಕು. ಸಮಾಜ ಎಚ್ಚೆತ್ತುಕೊಳ್ಳಬೇಕು, ಸ್ವಸ್ಥ ಸಮಾಜದ ನಿರ್ಮಾಣ ಆಗಬೇಕು ಎಂದರು.
ಇನ್ನು ಕಾರ್ಮಿಕ ಮುಖಂಡರಾದ ಜ್ಯೋತಿ ಅನಂತ ಸುಬ್ಬರಾವ್ ಅವರು ಮಾತನಾಡಿ, ಈ ವರ್ಷ ಕೋವಿಡ್ ಭಯಾನಕ ಸಂದರ್ಭದಲ್ಲಿ ಇದ್ದೇವೆ. ದೆಹಲಿಯಲ್ಲಿ ರೈತರು ಸತತವಾಗಿ ಹೋರಾಟದಲ್ಲಿದ್ದಾರೆ. ಸರ್ಕಾರದ ಬಳಿ ಬದುಕು ಕೊಡಿ ಎಂದು ಆಹಾರ ಭದ್ರತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ರೈತ ಮಹಿಳೆಯರಿಗಾಗಿ ಈ ವರ್ಷದ ಮಹಿಳಾ ದಿನಾಚರಣೆ ಮುಡಿಪಾಗಿಡಬೇಕಿದೆ ಎಂದರು.
ರೇಷನ್ ಇಲ್ಲದೇ ಇರುವ ಸ್ಥಿತಿ ಬಂದು, ಅಪೌಷ್ಠಿಕತೆ ಹೆಚ್ಚಾಗಿ ಹಸಿವಿನ ಸಾವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರದ ಮೂರು ರೈತವಿರೋಧಿ ಕಾಯ್ದೆಗಳಿಂದ ಆಹಾರ ಭದ್ರತೆಯೇ ಇಲ್ಲವಾಗಿ ಹೋಗುತ್ತದೆ. ಹೆಣ್ಣುಮಕ್ಕಳಿಗೆ ಸರ್ವದಿಕ್ಕಿನಿಂದಲೂ ದಾಳಿಯಾಗ್ತಿವೆ. ಅತ್ಯಾಚಾರ ವಿಚಾರವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೇ ಸಂತ್ರಸ್ತೆಯನ್ನು ಮದುವೆಯಾಗುವಂತೆ ಅತ್ಯಾಚಾರಿಗೆ ಅವಕಾಶ ಕೊಡ್ತಾರೆ. ನ್ಯಾಯಾಲಯಗಳೇ ಎಲ್ಲಿಗೆ ಹೋಗ್ತಿವೆ. ಸರ್ಕಾರ ಒಂದೊಂದು ರೀತಿಯ ಕಾನೂನು ತಂದರೆ, ನ್ಯಾಯಾಲಯವೂ ಹೆಣ್ಣುಮಕ್ಕಳ ಪಾಲಿಗೆ ನ್ಯಾಯ ಇಲ್ಲ ಎಂಬುದು ಸಾಬೀತಾಗ್ತಿವೆ, ಇನ್ನು ಯಾರನ್ನು ಕೇಳಲು ಸಾಧ್ಯ ಎಂದರು.
ಮಹಿಳೆಯರಿಗೆ ಉದ್ಯೋಗಗಳೂ ಇಲ್ಲವಾಗಿವೆ. ಸರ್ಕಾರ ಮತ್ತೆ ಮನುಸ್ಮೃತಿಯನ್ನು ಜಾರಿಗೆ ತರಲು ಮನಸ್ಸು ಮಾಡ್ತಿದೆ. ಇಂದಿನ ಮಹಿಳಾ ದಿನಾಚರಣೆ, ಇನ್ನೂ ಅನ್ಯಾಯಗಳನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ಎಲ್ಲಾ ಶೋಷಿತ ವರ್ಗ ಸೇರಿ ಅನ್ಯಾಯದ ವಿರುದ್ಧ ಹೋರಾಡ ಬೇಕಾಗಿದೆ ಎಂದರು.