ಬೆಂಗಳೂರು: ಮನೆಗೆ ನುಗ್ಗಿ ಮಹಿಳಾ ಅಧಿಕಾರಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ತಡರಾತ್ರಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೆ ಎಸ್ (37) ಕೊಲೆಯಾದವರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡ್ಕಿ ಮೂಲದ ಪ್ರತಿಮಾಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ನಂತರ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಪ್ರತಿಮಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. 2017ರಲ್ಲಿ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಪ್ರತಿಮಾ ನಂತರ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಮನೆಗೆ ಪ್ರತಿಮಾ ಅವರನ್ನು ಕಾರು ಚಾಲಕ ಡ್ರಾಪ್ ಮಾಡಿ ತೆರಳಿದ್ದ. ಬಳಿಕ ರಾತ್ರಿ ವೇಳೆ ಹಂತಕರು ಬಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮನೆಯೊಳಗೆ ಬಂದು ಕೊಲೆ ಮಾಡಿ ಹೋಗಿರುವುದರಿಂದ ಪೂರ್ವನಿಯೋಜಿತ ಕೃತ್ಯವೆಂದು ಶಂಕಿಸಲಾಗಿದೆ.
''ನಾನು ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದೆ. ಇವತ್ತು ಒಂದು ಮದುವೆಗೆ ಹೋಗಬೇಕಿದ್ದಿದ್ದರಿಂದ ನಿನ್ನೆ ರಾತ್ರಿಯಿಂದ ಕರೆ ಮಾಡುತ್ತಿದ್ದೆ. ಆದರೆ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಕರೆ ಮಾಡಿದಾಗಲೂ ಸ್ವೀಕರಿಸಿರಲಿಲ್ಲ. ಆದ್ದರಿಂದ ಕೆಳಗಿನ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದೆವು. ಅವರು ಬಂದು ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಕೆಲಸದ ವಿಚಾರವಾಗಿ ಏನೂ ಸಮಸ್ಯೆ ಇರಲಿಲ್ಲ. ಆ ರೀತಿ ಇದ್ದಿದ್ದರೆ ನನಗೆ ಹೇಳುತ್ತಿದ್ದಳು. ಮನೆಯಲ್ಲಿಯೂ ಏನೂ ಕಳ್ಳತನವಾಗಿಲ್ಲ. ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿದೆ'' ಎಂದು ಮೃತರ ಸಹೋದರ ಪ್ರತೀಶ್ ತಿಳಿಸಿದ್ದಾರೆ.
ಪ್ರತಿಮಾ ಓರ್ವ ಉತ್ತಮ ಅಧಿಕಾರಿ: ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ ದಯಾನಂದ್, ''ಪ್ರತಿಮಾ ಓರ್ವ ಉತ್ತಮ ಅಧಿಕಾರಿ. ಎಲ್ಲಾ ಸಭೆಗಳಲ್ಲಿಯೂ ಕಡತಗಳ ಜೊತೆಗೆ ಹಾಜರಾಗುತ್ತಿದ್ದವರು. ಕಳೆದ ಒಂದು ತಿಂಗಳ ಹಿಂದೆ ಎಲ್ಲಾ ಅಧಿಕಾರಿಗಳನ್ನು ಕರೆದು ಸ್ವಲ್ಪ ಜೋರು ಮಾಡಿದ್ದೆ. ಅಕ್ರಮವಾಗಿ ಜಲ್ಲಿಕಲ್ಲು, ಕಲ್ಲು ಗಣಿಗಾರಿಕೆ ನಡೀತಿದೆ, ತಮಿಳುನಾಡಿನಿಂದ ತರ್ತಿದ್ದಾರೆ ನೋಡಿ ಅಂದಿದ್ದೆ. ಕೆಲಸದ ಸಂಬಂಧ ಯಾವುದೇ ಸಮಸ್ಯೆ ಇರಲಿಲ್ಲ, ಆ ರೀತಿಯ ಯಾವುದೇ ದೂರು ಬಂದಿಲ್ಲ. ತಮಿಳುನಾಡಿನ ಕಡೆಗೆ ಬರುವ ಲಾರಿಗಳನ್ನು ತಡೆಯೋಕೆ ಹೇಳಿದ್ದೆ. ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ'' ಎಂದಿದ್ದಾರೆ.
ಇದನ್ನೂ ಓದಿ: ಹಾವೇರಿ: ಅಣ್ಣನ ಹೆಂಡತಿ, ಮಕ್ಕಳನ್ನು ನಿರ್ದಯವಾಗಿ ಕೊಂದು ಮೈದುನ ಪರಾರಿ