ಬೆಂಗಳೂರು: ಸುಜಾತ ಚಿತ್ರಮಂದಿರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಬಿದ್ದು ಮೃತಪಟ್ಟಿದ್ದು, ರಸ್ತೆ ಗುಂಡಿಯಿಂದಾಗಿ ಈ ಘಟನೆ ನಡೆದಿದೆ ಎಂಬ ಆರೋಪವಿದೆ. ಈ ಹಿನ್ನೆಲೆ ಘಟನೆ ಕುರಿತು ಸಮಗ್ರ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಪಘಾತ ಕುರಿತು ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಾಥಮಿಕ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಬೀದರ್ನಿಂದ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ರಸ್ತೆ ಗುಂಡಿಗೆ ಮಹಿಳೆ ಬಲಿ ಪ್ರಕರಣ ವಿಷಾಧನೀಯ. ಈಗಾಗಲೇ ಅಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸ್ಪಷ್ಟನೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲು ವರಿಷ್ಠರ ಸಮಯಾವಕಾಶ ಕೇಳಿದ್ದೇನೆ. ಜನ ಸಂಕಲ್ಪ ಯಾತ್ರೆ ನಡುವೆಯೇ ಅನುಮತಿ ಕೋರಿದ್ದೇನೆ. ಅವಕಾಶ ಸಿಗುತ್ತಿದ್ದಂತೆ ದೆಹಲಿಗೆ ತೆರಳಲಿದ್ದೇನೆ. ಇನ್ನೊಂದು ವಾರದಲ್ಲಿ ದೆಹಲಿ ಭೇಟಿ ಸಾಧ್ಯತೆ ಇದೆ ಎಂದರು.
ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆ ಎನ್ನುವುದು ಊಹಾಪೋಹ. ಅವರ ಕ್ಷೇತ್ರದ ಯೋಜನೆಗಳ ಕುರಿತು ಮಾತುಕತೆ ನಡೆಸಲು ಬಂದಿದ್ದರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ವಿಚಾರ ಕುರಿತು ಮಾತನಾಡಿದ್ದಾರೆ. ಯಾವುದೇ ರೀತಿಯ ಅಸಮಧಾನದ ಮಾತುಗಳನ್ನು ಅವರು ಆಡಿಲ್ಲ. ಅಸಮಧಾನವನ್ನೂ ವ್ಯಕ್ತಪಡಿಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಮೀಸಲಾತಿ ವಿಚಾರದಲ್ಲಿ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ಶೇ.4 ರಿಂದ 12 ಕ್ಕೆ ಹೆಚ್ಚಿಸಬೇಕು ಎಂದು ನಿರ್ಮಲಾನಂದ ಶ್ರೀಗಳು ಹೇಳಿದ್ದಾರೆ. ಅವರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ. ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಎಲ್ಲ ಆಯಾಮದಲ್ಲಿ ಆಲೋಚನೆ ನಡೆಸಲಾಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯ ಪಡೆದು, ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.