ಬೆಂಗಳೂರು : ಇತ್ತೀಚೆಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಮಹಿಳೆ ಏಕಾಏಕಿ ಕುಸಿದುಬಿದ್ದು ಸಾವಿಗೀಡಾಗಿರುವುದಕ್ಕೆ ಹೃದಯಾಘಾತ ಎಂದು ಹೇಳಲಾಗಿತ್ತು. ಆದರೆ, ಆಕೆ ಸಾವಿಗೆ ಹೃದಯಾಘಾತ ಕಾರಣವಲ್ಲ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಕಳೆದ ತಿಂಗಳು ಮಾರ್ಚ್ 26 ರಂದು ಮಲೇಶ್ ಪಾಳ್ಯದ ಜೀಮ್ನಲ್ಲಿ ವಿನಯಾ ಕುಮಾರಿ ಎಂಬುವರು ವರ್ಕ್ ಔಟ್ ಮಾಡುವಾಗ ಏಕಾಏಕಿ ಕುಸಿದುಬಿದ್ದಿದ್ದರು. ಆಸ್ಪತ್ರೆಗೆ ಸೇರುವ ಮಾರ್ಗ ಮಧ್ಯೆ ಮಹಿಳೆ ಮೃತಪಟ್ಟಿದ್ದರು. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸಿ.ವಿ.ರಾಮನ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಇದೀಗ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ವಿನಯ್ ಕುಮಾರಿ ಸಾವಿಗೆ ಹೃದಯಾಘಾತವಲ್ಲ. ಮೆದುಳಿನ ರಕ್ತನಾಳದ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ಉಂಟಾಗಿ ಕೋಮಾಗೆ ತಲುಪಿದ ಪರಿಣಾಮ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಕರಣ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಡಾ.ಭೀಮಾಶಂಕರ್ ಗುಳೇದ ಪ್ರತಿಕ್ರಿಯಿಸಿದ್ದು, ಮಹಿಳೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವೇಳೆ ಭಾರವಾದ ವಸ್ತುವನ್ನ ಲಿಫ್ಟ್ ಮಾಡಿದ್ದಾರೆ. ಈ ವೇಳೆ ರಕ್ತದ ಒತ್ತಡ ಉಂಟಾಗಿದೆ. ಮೆದುಳಿನಲ್ಲಿ ಒತ್ತಡದಿಂದ ರಕ್ತನಾಳಗಳು ಒಡೆದು, ರಕ್ತಸ್ರಾವವಾಗಿ ಕೋಮಾಗೆ ಹೋಗಿದ್ದಾರೆ. ಬಳಿಕ ಯುವತಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳೂರು ಮೂಲದ ವಿನಯ ವಿಠಲ ಐಡಿಸಿ ಕಂಪನಿಯಲ್ಲಿ ಬ್ಯಾಗ್ರೌಂಡ್ ವೆರಿಫಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರಂತೆ. ಈ ಯುವತಿ ಅತಿಯಾದ ವರ್ಕೌಟ್ ಮಾಡುತ್ತಿದ್ದರಂತೆ. ಆಗಾಗ ತಲೆ ನೋವು ಬರ್ತಿದ್ರೂ ಕಡೆಗಣಿಸಿದ್ದರಂತೆ ವಿನಯ. ಮಾ.26ರ ಶನಿವಾರ ಮುಂಜಾನೆ ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ 8 ಗಂಟೆ ಸುಮಾರಿಗೆ ದಿಢೀರ್ ಆಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆ ಸಾಗಿಸಲಾಗಿತ್ತಾದರೂ ಪ್ರಾಣಪಕ್ಷಿ ಹಾರಿ ಹೋಗಿತ್ತು.