ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಡ್ರಮ್‌ನಲ್ಲಿ ಶವ ಪತ್ತೆಯಾದ ಪ್ರಕರಣದ ರಹಸ್ಯ ಬೇಧಿಸಿರುವ ರೈಲ್ವೇ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮನ್ನಾ (27) ಕೊಲೆಯಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳು ಭಾಗಿಯಾಗಿದ್ದರು. ಈ ಪೈಕಿ ಕಮಾಲ್(21), ತನ್ವೀರ್ ಆಲಂ(28), ಶಾಕೀಬ್(25) ಎಂಬ ಮೂವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಉಳಿದ ಐವರು ಆರೋಪಿಗಳಾದ ನವಾಬ್, ಜಮಾಲ್, ಮಜರ್, ಅಸ್ಸಾಬ್ ಹಾಗು ಸಬೂಲ್ ತಲೆಮರೆಸಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯ ಹಿರಿಯ ಸಹೋದರನ ನೇತೃತ್ವದಲ್ಲೇ ಹತ್ಯೆ ನಡೆದಿರುವುದು ತನಿಖೆಯ ಸಂದರ್ಭದಲ್ಲಿ ಬಯಲಾಗಿದೆ.
ಹತ್ಯೆಗೆ ಕಾರಣ: ಬಿಹಾರ ಮೂಲದ ತಮನ್ನಾಗೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಅಫ್ರೋಜ್ ಎಂಬಾತನೊಂದಿಗೆ ವಿವಾಹವಾಗಿತ್ತು. ವಿಕಲಚೇತನನಾಗಿದ್ದ ಈತನಿಂದ ಎರಡೇ ತಿಂಗಳಿಗೆ ವಿಚ್ಚೇದನ ಪಡೆದಿದ್ದ ತಮನ್ನಾ, ಅಫ್ರೋಜ್ನ ಚಿಕ್ಕಪ್ಪನ ಮಗ ಇಂತಿಕಾಬ್ ಜೊತೆ ಬೆಂಗಳೂರಿಗೆ ಬಂದಿದ್ದರು. ಇಬ್ಬರೂ ವಿವಾಹವಾಗಿ ಜಿಗಣಿ ಬಳಿ ವಾಸವಿದ್ದರು. ಆದರೆ, ಆಕೆಯಿಂದ ಕುಟುಂಬದ ನೆಮ್ಮದಿ ಹಾಳಾಯಿತೆಂದು ಆತನ(ಇಂತಿಕಾಬ್) ಸಹೋದರ ನವಾಬ್ ಕೋಪಗೊಂಡಿದ್ದ.
ಬಳಿಕ ನಡೆದಿದ್ದೇನು?: ಬೆಂಗಳೂರಿಗೆ ಬಂದಿದ್ದ ನವಾಬ್ ಮಾರ್ಚ್ 12ರಂದು ಸಹೋದರ ಇಂತಿಕಾಬ್ಗೆ ಕರೆ ಮಾಡಿ, "ಮದುವೆಯಾದಾಗಿನಿಂದ ಬೆಂಗಳೂರು ಹೊರವಲಯದಲ್ಲಿ ನೆಲೆಸಿದ್ದೀರಿ. ಭೇಟಿಯಾಗೋಣ ಬನ್ನಿ. ಸಿಟಿ ಸುತ್ತಾಡಿಕೊಂಡು ಹೋಗುವಿರಂತೆ" ಎಂದು ಆಹ್ವಾನಿಸಿದ್ದ. ಅದರಂತೆ ಇಂತಿಕಾಬ್ ಮತ್ತು ತಮನ್ನಾ ಜಿಗಣಿಯಿಂದ ಕಲಾಸಿಪಾಳ್ಯದಲ್ಲಿ ನವಾಬ್ ನೆಲೆಸಿದ್ದ ಮನೆಗೆ ಬಂದಿದ್ದರು. ಇಂತಿಕಾಬ್, ತಮನ್ನಾ, ನವಾಬ್, ಕಮಾಲ್, ತನ್ವೀರ್ ಆಲಂ, ಶಾಕೀಬ್, ಜಮಾಲ್, ಮಸ್ಸರ್, ಅಸ್ಸಾಬ್, ಸಬೂಲ್ ಎಲ್ಲರೂ ಒಟ್ಟಿಗೆ ಬೆಂಗಳೂರು ಸುತ್ತಾಡಿ, ಮಧ್ಯಾಹ್ನ ಊಟ ಮಾಡಿದ್ದರು. ಆ ಬಳಿಕ ಮಾತನಾಡುತ್ತಾ, "ತಮನ್ನಾಳಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿದೆ. ಆಕೆ ಬೆಂಗಳೂರಿನಲ್ಲಿ ಇರುವುದು ಬೇಡ, ಬಿಹಾರಕ್ಕೆ ಕಳಿಸುತ್ತೇನೆ, ನೀನು ವಾಪಸ್ ನಿನ್ನ ಮನೆಗೆ ಹೋಗು" ಎಂದಿದ್ದ. ಬಳಿಕ ಸಹೋದರ ಇಂತಿಕಾಬ್‌ನನ್ನು ಬೆದರಿಸಿ ವಾಪಸ್ ಜಿಗಣಿಗೆ ಕಳಿಸಿದ್ದ.
ಅದೇ ದಿನ ಸಂಜೆ 6 ಗಂಟೆಗೆ ತಮನ್ನಾಳ ಕತ್ತು ಬಿಗಿದು ಹತ್ಯೆಗೈದಿದ್ದಾನೆ. ಆರೋಪಿಗಳು ಶವದ ಕಾಲುಮುರಿದು ತಾವು ಮೊದಲೇ ಸಿದ್ಧಪಡಿಸಿಕೊಂಡಿದ್ದ ನೀಲಿ ಬಣ್ಣದ ಡ್ರಮ್ಮಿಗೆ ತುಂಬಿ ಸೀಲ್ ಮಾಡಿದ್ದರು. ರಾತ್ರಿ 11:45ರ ಸುಮಾರಿಗೆ ಆಟೋದಲ್ಲಿ ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣಕ್ಕೆ ತೆರಳಿ ಪೋರ್ಟಿಕೋ ಮುಂದೆ ಡ್ರಮ್ ಇಟ್ಟು ಪರಾರಿಯಾಗಿದ್ದರು. ಮಾರ್ಚ್ 13ರಂದು ಬೆಳಿಗ್ಗೆ ಡ್ರಮ್‌ನಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೈಯ್ಯಪ್ಪನಹಳ್ಳಿ ರೈಲ್ವೇ ಪೊಲೀಸರು ಮೃತದೇಹವಿದ್ದ ಡ್ರಮ್ ಮೇಲಿದ್ದ ಸ್ಟಿಕ್ಕರ್ ಮೇಲಿದ್ದ ವಿಳಾಸ ಆಧರಿಸಿ ತನಿಖೆ ಕೈಗೊಂಡಾಗ ಮೂವರು ಆರೋಪಿಗಳನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಐವರಿಗಾಗಿ ಶೋಧ ಮುಂದುವರಿಸಿದ್ದಾರೆ.
"ಈ ಹಿಂದೆ ನಗರದ ಎರಡು ರೈಲ್ವೇ ನಿಲ್ದಾಣಗಳಲ್ಲಿ ಇದೇ ಮಾದರಿಯಲ್ಲಿ ಶವ ಪತ್ತೆಯಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ" ಎಂದು ರಾಜ್ಯ ರೈಲ್ವೇ ಎಸ್ಪಿ ಡಿ.ಸೌಮ್ಯಲತಾ ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಮ್ ನಲ್ಲೇ ಮತ್ತೊಂದು ಶವ ಪತ್ತೆ ಪ್ರಕರಣ.. ಆರೋಪಿಗಳ ಸುಳಿವು ಸಿಕ್ಕಿದೆ ಎಂದ ರೈಲ್ವೆ ಎಸ್ಪಿ