ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ಅಡುಗೆ ಅನಿಲ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಳಿದು ಪ್ರತಿಭಟಿಸಿದರು.
ನಗರದ ಟೌನ್‌ಹಾಲ್ ಮುಂದೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವದಲ್ಲಿ ನೂರಾರು ಮಹಿಳೆಯರು ಸೇರಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಇದೇ ವೇಳೆ ಖಾಲಿ ಸಿಲಿಂಡರ್, ಪಾತ್ರೆ, ತಟ್ಟೆ, ಲೋಟ, ಸೌದೆ ಒಲೆಗಳನ್ನು ತಂದು ತಟ್ಟೆ ಬಾರಿಸುವ ಮೂಲಕ ಅಕ್ರೋಶ ವ್ಯಕ್ತಪಡಿಸಿದ್ರು.
ಇದೇ ವೇಳೆ ಮಾತನಾಡಿದ ಪುಷ್ಪ ಅಮರನಾಥ್, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 6 ಬಾರಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದಾರೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 40 ರೂ. ಗ್ಯಾಸ್ ಬೆಲೆ ಏರಿಕೆ ಮಾಡಿದ್ದಕ್ಕೆ ಸ್ಮೃತಿ ಇರಾನಿ ಬೀದಿಗಿಳಿದು ಬೊಬ್ಬೆ ಹೊಡೆದಿದ್ರು. ಅದರೀಗ ಬಿಜೆಪಿ ಸರ್ಕಾರ 145 ರೂ ಏರಿಕೆ ಮಾಡಿದೆ. ಈಗ ಸ್ಮೃತಿ ಇರಾನಿ ಎಲ್ಲಿ ಹೋದ್ರು? ಮಹಿಳೆಯರ ಪರ ನಿಲ್ಲಬೇಕಾದ ಸಚಿವೆ ನಿರ್ಮಲಾ ಸೀತರಾಮನ್ ಏನು ಮಾಡ್ತಿದ್ದಾರೆ? ಎಂದು ಪುಷ್ಪ ಅಮರನಾಥ್ ಆಕ್ರೋಶ ವ್ಯಕ್ತಪಡಿಸಿದ್ರು.
ಗ್ಯಾಸ್ ಬೆಲೆಯನ್ನು ದೆಹಲಿ ಚುನಾವಣೆಗಾಗಿ ಕಡಿಮೆ ಮಾಡಿದ್ರು. ಈಗ ದೆಹಲಿ ಎಲೆಕ್ಷನ್ ಮುಗಿದು ಫಲಿತಾಂಶ ಬಂದ ಮುಂದಿನ ದಿನವೇ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆ ವಾಪಸ್ ಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಉಗ್ರ ಹೋರಾಟ ಮಾಡುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ರು.