ಬೆಂಗಳೂರು: ಮಹಾಮಾರಿ ಕೊರೊನಾ ಭಯದಿಂದಾಗಿ ಶಾಲೆಗಳನ್ನು ಪುನಾರಂಭಿಸಲು ಸರ್ಕಾರ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದ್ರೆ ನಗರದ ಇದೊಂದು ಶಾಲೆ ಸರ್ಕಾರದ ಮಾತಿಗೆ ಕಿಮ್ಮತ್ತು ಕೊಡದೇ ತಮಗಿಷ್ಟ ಬಂದ ರೀತಿಯಲ್ಲಿ ಶಾಲೆ ತೆರೆದುಿ ತರಗತಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಶಾಲೆ ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆ ಅನುಮತಿ ಇಲ್ಲದಿದ್ದರೂ ಕಾರ್ಮಲ್ ಗಾರ್ಡನ್ ಪ್ರೌಢಶಾಲೆಯಲ್ಲಿ 8 ನೇ ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ನಂದಿನಿ ಲೇಔಟ್ನಲ್ಲಿರುವ ಶಾಲೆ ಕೋವಿಡ್ ಮಾರ್ಗಸೂಚಿ ಅನುಸರಿಸದೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎಂದು ಹೇಳಲಾಗ್ತಿದೆ.
ಶಿಕ್ಷಕರು ಪಾಳಿ ಪ್ರಕಾರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಸರ್ಕಾರದ ಅನುಮತಿಗೂ ಮೊದಲೇ ಶಾಲೆ ಪುನಾರಂಭವಾಗಿದೆ. ಶುಲ್ಕ ಕಟ್ಟಿಸಿಕೊಳ್ಳಲು ಈ ಖಾಸಗಿ ಶಾಲೆ ಆರಂಭಿಸಿರುವುದಾಗಿ ತಿಳಿದುಬಂದಿದೆ. ಶಾಲೆಗೆ ಬಂದಂತಹ ಮಕ್ಕಳಿಗೆ ಸ್ಕ್ರೀನಿಂಗ್, ಟೆಸ್ಟಿಂಗ್, ಸ್ಯಾನಿಟೈಸಿಂಗ್ ಇವೆಲ್ಲವನ್ನು ಗಾಳಿಗೆ ತೂರಿ ಬೋಧನೆ ಮಾಡುತ್ತಿದ್ದು, ಸಿಬ್ಬಂದಿಗೆ ಪ್ರಶ್ನೆ ಮಾಡಿದರು ಯಾರೂ ಉತ್ತರಿಸುತ್ತಿಲ್ಲ.
ಒಟ್ಟಾರೆಯಾಗಿ ಸರ್ಕಾರ ಈಗಾಗಲೇ ಕಾಲೇಜುಗಳನ್ನ ಆರಂಭಿಸಿದ್ದು, ಹಲವು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಹೀಗಾಗಿ ಪೋಷಕರಲ್ಲಿಯೂ ಆತಂಕ ಹೆಚ್ಚಾಗಿದ್ದೆ. ಈ ಮಧ್ಯೆ ಶಾಲೆಗಳನ್ನ ಹೇಳದೆ ಕೇಳದೆ ಆರಂಭಿಸಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತಿದೆ.