ಬೆಂಗಳೂರು : ವಿಧಾನಪರಿಷತ್ನ ಸಭಾಪತಿ ಸ್ಥಾನದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಪರಿಷತ್‍ನಲ್ಲಿ ಹೆಚ್ಚು ಸಂಖ್ಯಾಬಲ ಹೊಂದಿದ್ದರೂ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಾಧ್ಯವಿಲ್ಲ. ಹೀಗಾಗಿ ಜೆಡಿಎಸ್‌ನ ಬೆಂಬಲ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
ಒಂದೂವರೆ ವರ್ಷಗಳ ಕಾಲ ಸಭಾಪತಿ ಸ್ಥಾನ ಜೆಡಿಎಸ್ಗೆ ಬಿಟ್ಟುಕೊಟ್ಟು 2022ರಲ್ಲಿ ಸಭಾಪತಿ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಲೆಕ್ಕಾಚಾರ ಮಾಡಿದೆ. ಅದಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.
ವಿಧಾನಪರಿಷತ್ನ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಧಿಕ ಸಂಖ್ಯಾಬಲ ಹೊಂದಿರುವ ಬಿಜೆಪಿ, ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ಮಂಡನೆಗೆ ನಿರ್ಧರಿಸಿದೆ.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ನ ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಸದಸ್ಯ ಧರ್ಮೇಗೌಡ ಉಪಸಭಾಪತಿ ಆಗಿದ್ದಾರೆ. ಬಿಜೆಪಿ ಸದಸ್ಯರನ್ನು ಸಭಾಪತಿಯನ್ನಾಗಿ ಮಾಡಲು ಸಂಖ್ಯಾಬಲದ ಕೊರತೆ ಇರುವುದರಿಂದ ಜೆಡಿಎಸ್ ಬೆಂಬಲ ಪಡೆದುಕೊಂಡು ಈಗಿರುವ ಸಭಾಪತಿ ಅವರನ್ನು ಕೆಳಗಿಳಿಸಲು ತಯಾರಿ ನಡೆದಿದೆ.
ಇದರ ಲಾಭ ಪಡೆಯಲು ಮುಂದಾಗಿರುವ ಜೆಡಿಎಸ್ ಸಂಖ್ಯಾಬಲ ಕಡಿಮೆಯಿದ್ದರೂ ಸಭಾಪತಿ ಸ್ಥಾನ ಮಾತ್ರ ತನಗೆ ನೀಡುವಂತೆ ಪಟ್ಟು ಹಿಡಿದಿದೆ. ಈ ಸಂಬಂಧ ಬಿಜೆಪಿ ಸಹಮತ ವ್ಯಕ್ತಪಡಿಸಿದ್ದು, ಜೆಡಿಎಸ್‌ನ ಹಿರಿಯ ಮುಖಂಡ, ಪರಿಷತ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಒಂದೂವರೆ ವರ್ಷಗಳ ಕಾಲ ಸಭಾಪತಿ ಸ್ಥಾನ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಎರಡೂ ಪಕ್ಷದ ನಾಯಕರು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. 2022ರ ಜೂನ್-ಜುಲೈವರೆಗೆ ವಿಧಾನಪರಿಷತ್ತಿನ ಯಾವುದೇ ಚುನಾವಣೆ ನಡೆಯುವುದಿಲ್ಲ. ಆ ನಂತರ ಕೆಲ ಸ್ಥಾನಗಳಿಗೆ ಚುನಾವಣೆ ಮತ್ತು ನಾಮ ನಿರ್ದೇಶನಗಳು ನಡೆಯಲಿವೆ. ಆಗ ಬಿಜೆಪಿ ಸಂಪೂರ್ಣವಾಗಿ ಸಂಖ್ಯಾಬಲ ಪಡೆದುಕೊಳ್ಳುವ ಸಾಧ್ಯತೆಯಿದೆ.
ಅಲ್ಲಿಯವರೆಗೆ ಜೆಡಿಎಸ್‌ನ ಬೆಂಬಲ ಪಡೆದು ಅದೆ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಅಗತ್ಯ ಸ್ಥಾನ ಪಡೆದ ಬಳಿಕ ಬಿಜೆಪಿ ಸದಸ್ಯನನ್ನು ಸಭಾಪತಿಯನ್ನಾಗಿ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿಯ ಆಂತರಿಕ ವಲಯದಲ್ಲಿಯೂ ಸಮಾಲೋಚನೆ ನಡೆದಿದ್ದು, ಉಭಯಪಕ್ಷಗಳ ನಾಯಕರು ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಖ್ಯಾಬಲವೆಷ್ಟು?: ಮೇಲ್ಮನೆಯಲ್ಲಿ 75 ಸದಸ್ಯರಿದ್ದಾರೆ. ಸಭಾಪತಿ ಸ್ಥಾನಕ್ಕೆ 39 ಮಂದಿ ಸದಸ್ಯರ ಬೆಂಬಲ ಅಗತ್ಯವಿದೆ. ಪ್ರಸ್ತುತ ಬಿಜೆಪಿ 31, ಕಾಂಗ್ರೆಸ್ 28, ಜೆಡಿಎಸ್ 14 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಸದಸ್ಯರನ್ನು ಸಭಾಪತಿಯನ್ನಾಗಿ ನೇಮಕ ಮಾಡಲು 8 ಮಂದಿಯ ಸದಸ್ಯರ ಕೊರತೆ ಇದೆ.
ಹೀಗಾಗಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸಲು ಬಿಜೆಪಿಗೆ ಜೆಡಿಎಸ್ ಬೆಂಬಲ ಅಗತ್ಯ. ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಹುದ್ದೆ ನೀಡಲು ಚರ್ಚೆಗಳು ನಡೆಯುತ್ತಿವೆ. ಜೆಡಿಎಸ್ ಪಕ್ಷದಲ್ಲೂ ಸಹ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಬೇಕೆಂಬ ಮಾತು ಕೇಳಿ ಬರುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯನ್ನಾಗಿ ಮಾಡಲಾಗಿತ್ತು.
ಆದರೆ, ರಾಜಕೀಯ ಕಾರಣಾಂತರಗಳಿಂದಾಗಿ ಸಭಾಪತಿ ಹುದ್ದೆಯಿಂದ ಕೆಳಗಿಳಿಸಲಾಯಿತು. ಇದೀಗ ಮತ್ತೊಮ್ಮೆ ಸಭಾಪತಿಯನ್ನಾಗಿ ಮಾಡಲು ಬಿಜೆಪಿ-ಜೆಡಿಎಸ್ ಮುಂದಾಗಿದೆ. ಈ ಸಂಬಂಧ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಅಧಿವೇಶನದ ಅವಧಿಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಮತ್ತು ಕೈಗಾರಿಕಾ ಮತ್ತಿತರ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಆದರೆ, ಮೇಲ್ಮನೆಯಲ್ಲಿ ಅಂಗೀಕರಿಸಲು ಸಾಧ್ಯವಾಗಲಿಲ್ಲ. ಬಿಜೆಪಿ ಸರ್ಕಾರದ ಉದ್ದೇಶಿತ ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ, ಕೈಗಾರಿಕೆ ಕಾಯ್ದೆ ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಶೀಘ್ರದಲ್ಲೇ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ. ಸಭಾಪತಿ ಆಯ್ಕೆ ಸಂಬಂಧ ಜೆಡಿಎಸ್ ಪಕ್ಷವನ್ನು ಸಂಪರ್ಕಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಿಜೆಪಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಳಿಗಾಲದ ಅಧಿವೇಶನ ಡಿ.7 ರಿಂದ 15ರವರೆಗೆ ನಡೆಯಲಿದ್ದು, ಈ ಅಧಿವೇಶನದಲ್ಲಿ ರಾಜಕೀಯ ಬೆಳವಣಿಗೆ ಆಗಲಿದೆಯೇ ಎಂಬುದನ್ನ ಕಾದು ನೋಡಬೇಕಿದೆ.