ಬೆಂಗಳೂರು: ಪ್ರಿಯಕರನ ಜೊತೆ ಸಂಚು ರೂಪಿಸಿ ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ, ಪತಿ ಕಾಣೆಯಾಗಿದ್ದಾನೆ ಎಂದು ಕಥೆ ಕಟ್ಟಿದ್ದ ಪತ್ನಿಯನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪತ್ನಿಗೆ ಸಹಕರಿಸಿದ ಪ್ರಿಯಕರ ಹಾಗೂ ಇನ್ನೊಬ್ಬ ಸಹಚರನನ್ನೂ ಅರೆಸ್ಟ್ ಮಾಡಲಾಗಿದೆ.
ಮೃತ ಹರೀಶ್ ಹಾಗೂ ಕೃಪಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಂಡ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಕೃಪಾ ಮದುವೆಗೂ ಮುನ್ನ ಆಟೋ ಚಾಲಕ ಅಭಿಲಾಷ್ನನ್ನು ಪ್ರೀತಿಸಿದ್ದಳು. ಹರೀಶ್ ಜೊತೆ ವಿವಾಹ ಆದರೂ ಹಳೆಯ ಪ್ರಿಯಕರನ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೇ ಇಬ್ಬರು ಸಹ ಓಡಿ ಹೋಗಿದ್ದರು. ಈ ವಿಷಯ ಹರೀಶ್ಗೆ ಗೊತ್ತಾಗಿ ಹೆಂಡತಿ ಮೇಲೆ ರೇಗಾಡಿದ್ದ. ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಲಾಗಿತ್ತು. ಕೆಲ ದಿನಗಳ ಬಳಿಕ ಹಳೆ ವರಸೆ ಮುಂದುವರೆಸಿದ ಕೃಪಾ ಪ್ರಿಯಕರನೊಂದಿಗೆ ಸಂಬಂಧ ಮುಂದುವರೆಸಿದ್ದಳು. ಗಂಡನಿಗೆ ಈ ವಿಷಯ ಗೊತ್ತಾಗಿ ಇದೇ ವಿಚಾರಕ್ಕಾಗಿಯೇ ಇಬ್ಬರ ನಡುವೆ ಮತ್ತೆ ಜಗಳವಾಡಿಕೊಂಡಿದ್ದರಂತೆ.
ನಿತ್ಯ ಜಗಳದಿಂದ ಬೇಸತ್ತ ಪತ್ನಿ - ಗಂಡನ ಕೊಲೆಗೆ ಸ್ಕೆಚ್: ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ ಕೃಪಾ, ಪ್ರಿಯಕರ ಅಭಿಲಾಷ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಾಳೆ. ಜು.9 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಮಲಗಿದ್ದಾಗ ಆಭಿಲಾಷ್ನನ್ನು ಕೃಪಾ ಮನೆಗೆ ಕರೆಯಿಸಿಕೊಂಡಿದ್ದಾಳೆ. ಪೂರ್ವ ಸಂಚಿನಂತೆ ಮತ್ತೊಬ್ಬ ಆರೋಪಿ ಮೊಹಮ್ಮದ್ ರಫಿಕ್ ಜೊತೆಗೆ ಅಭಿಲಾಷ್ ಪ್ರಿಯತಮೆ ಮನೆಗೆ ಬಂದಿದ್ದಾನೆ. ಮಲಗಿದ್ದ ಹರೀಶ್ ತಲೆ ಮೇಲೆ ಸೈಜು ಕಲ್ಲು ಎತ್ತಿ ಹಾಕಿ, ಏಳು ಬಾರಿ ಚಾಕುವಿನಿಂದ ಇರಿದು ಹರೀಶ್ ಕೊಂದು ಹಾಕಿದ್ದಾರೆ. ಕೊಲೆ ಮಾಡಿದ ಬಳಿಕ ಹರೀಶ್ ಶವವನ್ನ ಮೂಟೆಯಲ್ಲಿ ಇಟ್ಟುಕೊಂಡು ಮನೆಯ ಹಿಂಭಾಗದಲ್ಲಿರುವ ರಾಜಕಾಲುವೆಗೆ ಎಸೆದಿದ್ದಾರೆ.
ಗಂಡ ನಾಪತ್ತೆ ಎಂದು ಪತ್ನಿಯಿಂದಲೇ ದೂರು: ಕೊಲೆಯಾದ ಬಳಿಕ ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಪತ್ನಿ ಕೃಪಾ, ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೇ ವೇಳೆ, ರಾಜಕಾಲುವೆಯಲ್ಲಿ ಶವ ಸಿಗುತ್ತಿದ್ದಂತೆಯೇ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಹರೀಶ್ ಶವ ಎಂಬುದು ಖಾತ್ರಿಯಾಗಿತ್ತು.
ತಕ್ಷಣ ಪ್ರಕರಣದ ಬೆನ್ನಟ್ಟಿದ ಪೊಲೀಸರು, ಕೃಪಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿತ್ತು. ಆರೋಪಿ ಪತ್ನಿ ನೀಡಿದ ಮಾಹಿತಿ ಆಧರಿಸಿ, ಪ್ರಿಯಕರ ಹಾಗೂ ಆತನ ಸಹಚರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.