ಬೆಂಗಳೂರು: ಮಾದಕ ವಸ್ತು ಸೇವನೆ ದಾಸನಾಗಿದ್ದ ಗಂಡ ಪತ್ನಿಗೆ ಡ್ರಗ್ಸ್ ಸೇವಿಸುವಂತೆ ಒತ್ತಾಯಿಸುವುದಲ್ಲದೆ ವರದಕ್ಷಿಣೆ ನೀಡಬೇಕೆಂದು ಚಿತ್ರಹಿಂಸೆ ನೀಡುತ್ತಿದ್ದ ಎಂಬ ಆರೋಪದಡಿ ನಗರದ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಮಂಗಲ ನಿವಾಸಿಯಾಗಿರುವ ರೋಹಿತ್ ಎಂಬಾತ ಡ್ರಗ್ಸ್ ವ್ಯಸನಿಯಾಗಿದ್ದು, ಪತ್ನಿಗೆ ಡ್ರಗ್ಸ್ ಸೇವಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್, ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ.
ಆರಂಭದಲ್ಲಿ ಚೆನ್ನಾಗಿದ್ದ ದಂಪತಿ ಮಧ್ಯೆ ನಂತರದ ದಿನಗಳಲ್ಲಿ ಬಿರುಕು ಮೂಡಿದೆ. ಡ್ರಗ್ಸ್ ಚಟ ಬೆಳೆಸಿಕೊಂಡಿದ್ದ ರೋಹಿತ್ ಡ್ರಗ್ಸ್ ಪೆಡ್ಲರ್ಗಳಿಂದ ಕೊಕೇನ್ ತರಿಸಿಕೊಂಡು ಮನೆಯಲ್ಲೇ ಸೇವನೆ ಮಾಡುತ್ತಿದ್ದನಂತೆ. ಈ ವಿಷಯ ಆತನ ತಂದೆ-ತಾಯಿಯವರಿಗೆ ಗೊತ್ತಿದ್ದರೂ ವಿರೋಧ ವ್ಯಕ್ತಪಡಿಸಿರಲಿಲ್ಲ.
ಪತ್ನಿಗೆ ಮೊಬೈಲ್ ಮೇಲೆ ಕೊಕೇನ್ ಇಟ್ಟು ಹೇಗೆ ಎಳೆಯಬೇಕು ಎಂದು ಹೇಳುವುದಲ್ಲದೆ ಮಾದಕ ವಸ್ತುವಿನ ವಿವರಣೆ ನೀಡುತ್ತಿದ್ದನಂತೆ. ಅಷ್ಟೇ ಅಲ್ಲದೆ ಡ್ರಗ್ಸ್ ಸೇವಿಸೋದನ್ನು ಪತ್ನಿಯಿಂದಲೇ ವಿಡಿಯೋ ಮಾಡಿಸಿ ವಿಕೃತಿ ಮೆರೆಯುತ್ತಿದ್ದನಂತೆ. ಕೇವಲ ಕೊಕೇನ್ ಅಷ್ಟೇ ಅಲ್ಲದೆ ಗಾಂಜಾವನ್ನು ಮನೆಯಲ್ಲಿ ಸ್ಟಾಕ್ ಮಾಡಿದ್ದನಂತೆ. ಅಲ್ಲದೆ ಪತ್ನಿಗೂ ಮಾದಕ ಟ್ಯಾಬ್ಲೆಟ್ ತಿನ್ನಿಸಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.