ಬೆಂಗಳೂರು: ಕರ್ನಾಟಕದಾದ್ಯಂತ ಈ ಬಾರಿ ಕಾಂಗ್ರೆಸ್ ಅಲೆ ಬೀಸಿದೆ. ಇದು ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಗದ್ದುಗೆ ಗುದ್ದಾಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ ಸಿಕ್ಕಿದೆ. ಇದೀಗ ಕೈ ಪಾಳಯದಿಂದ ಯಾರಾಗ್ತಾರೆ ಸಿಎಂ? ಎಂಬುದು ಚರ್ಚೆಗೆ ಗ್ರಾಸವಾಗಿದೆ.
135 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಆಡಳಿತಾರೂಢ ಬಿಜೆಪಿ 66 ಸ್ಥಾನಕ್ಕೆ ಕುಸಿದರೆ, ಕೇವಲ 19 ಸ್ಥಾನಗಳನ್ನು ಪಡೆದು ಜೆಡಿಎಸ್ ಧೂಳೀಪಟವಾಗಿದೆ. ಇದೀಗ ಮುಂದಿನ ಸಿಎಂ ಆಯ್ಕೆಯ ಕಸರತ್ತು ಶುರುವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಇದರಲ್ಲಿ ಕೆಲವರ ಹೆಸರು ಮುನ್ನಲೆಯಲ್ಲಿದ್ದರೆ, ಇನ್ನೂ ಹಲವರ ಹೆಸರು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ.
ಸಿದ್ದರಾಮಯ್ಯ-ಡಿಕೆಶಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿಗಾಗಿ ಪೈಪೋಟಿ ಇದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಹಿರಂಗವಾಗಿಯೇ ಈ ಹಿಂದೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಆಸೆ ಹೇಳಿದ್ದರು. ಸಿಎಂ ಆಯ್ಕೆ ಚೆಂಡು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿದೆ. ಇಬ್ಬರಿಗೂ ಸಮಾಧಾನವಾಗುವ ಫಾರ್ಮುಲಾವನ್ನು ಹೈಕಮಾಂಡ್ ರೂಪಿಸಬೇಕಾಗಿದೆ.
ಕಾಂಗ್ರೆಸ್ನಲ್ಲಿ ಇನ್ನೊಂದಷ್ಟು ನಾಯಕರು ಮೌನವಾಗಿಯೇ ಸಿಎಂ ಪಟ್ಟದ ಮೇಲೆ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಇದರಲ್ಲಿ ಪ್ರಮುಖವಾಗಿ ಡಾ.ಜಿ.ಪರಮೇಶ್ವರ್. ಮೊದಲಿನಿಂದಲೂ ಸಿಎಂ ಸ್ಥಾನದ ಕನಸು ಕಾಣುತ್ತಿರುವ ಇವರು, ಈ ಕುರಿತ ಆಸೆಯನ್ನು ಈಗಾಗಲೇ ಹೊರಹಾಕಿದ್ದಾರೆ. ಬಹಿರಂಗವಾಗಿಯೇ ನಾನು ಸಿಎಂ ಆಕಾಂಕ್ಷಿ ಎಂದು ಹೇಳುವ ಮೂಲಕ ತಾವೂ ಕಾಂಗ್ರೆಸ್ನಲ್ಲಿ ಸಿಎಂ ಸ್ಪರ್ಧಿ ಎಂಬುದನ್ನು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಮುಖ್ಯಮಂತ್ರಿ ಪಟ್ಟಕ್ಕೇರುವ ಮಾತುಗಳು ಕೇಳಿ ಬರುತ್ತಿವೆ. ದಲಿತ ನಾಯಕ ಖರ್ಗೆಯವರನ್ನು ಸಿಎಂ ಮಾಡಿದರೆ ಎಲ್ಲರೂ ಒಪ್ಪುವ ನಾಯಕತ್ವ ಎಂಬ ಹಿನ್ನೆಲೆಯಲ್ಲಿ ಅವರ ಹೆಸರೂ ಹಿನ್ನೆಲೆಯಲ್ಲಿದೆ. ಆದರೆ, ಎಐಸಿಸಿ ಅಧ್ಯಕ್ಷ ಪಟ್ಟ ಬಿಟ್ಟು ಸಿಎಂ ಸ್ಥಾನ ನೀಡುವುದುದಕ್ಕೆ ಹೈಕಮಾಂಡ್ ನೂರು ಬಾರಿ ಯೋಚನೆ ಮಾಡಬೇಕು. ಇನ್ನುಳಿದಂತೆ, ಲಿಂಗಾಯತ ನಾಯಕ ಎಂ.ಬಿ.ಪಾಟೀಲ್ ಕೂಡ ಸಿಎಂ ಸ್ಥಾನದ ಮೇಲೆ ಗುರಿ ಇಟ್ಟಿರುವುದು ಗೌಪ್ಯವಾಗಿಲ್ಲ. ಲಿಂಗಾಯತ ಸಮಾಜದ ವಿಶ್ವಾಸ ಗಿಟ್ಟಿಸಲು ಪಾಟೀಲರಿಗೆ ಸಿಎಂ ಸ್ಥಾನ ನೀಡಬೇಕು ಎಂಬುದು ಹಲವರ ಅಭಿಪ್ರಾಯ.
ಉಳಿದಂತೆ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ ಸಿಎಂ ಸ್ಥಾನದ ಆಕಾಂಕ್ಷಿಗಳು. ಪರೋಕ್ಷವಾಗಿ ಈ ನಾಯಕರು ಸಿಎಂ ಪಟ್ಟದ ಬಗ್ಗೆ ತಮ್ಮ ಅಭಿಲಾಷೆ ಹೊರಹಾಕಿದ್ದಾರೆ. ತೆರೆಮರೆಯಲ್ಲಿ ಸಿಎಂ ಗದ್ದುಗೆಯ ಬಗ್ಗೆ ಕನಸು ಕಾಣುತ್ತಿದ್ದಾರೆ.
ಇದನ್ನೂ ಓದಿ: ಅಖಾಡದಲ್ಲಿ ಗೆದ್ದ ಬಿಜೆಪಿ- ಕೈ ಕಲಿಗಳು ಹೇಳಿದ್ದೇನು?