ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ಮತ್ತೊಮ್ಮೆ ಹೇಳಿದ ಮಾಜಿ ಸಚಿವ ಜಮೀರ್ ಅಹಮದ್ಗೆ ಡಿಕೆಶಿ ಪ್ರತಿಯಾಗಿ, ಯಾರು ಹದ್ದುಮೀರಿ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜಮೀರ್ ಅಹಮದ್ ಸಿಎಂ ಸಿದ್ದರಾಮಯ್ಯ ಎಂಬ ಮಾತನ್ನು ಮತ್ತೊಮ್ಮೆ ಎತ್ತಿದ್ದಾರೆ.
ಇದೇ ಸಂದರ್ಭ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಡಿಕೆ ಶಿವಕುಮಾರ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು ಮತ್ತೊಮ್ಮೆ ಇಂತಹ ಹೇಳಿಕೆಗಳು ಮರುಕಳಿಸಬಾರದು ಎಂದು ಪರೋಕ್ಷ ಎಚ್ಚರಿಕೆಯನ್ನು ಜಮೀರ್ಗೆ ನೀಡಿದ್ದಾರೆ.
ನಡೆದದ್ದೇನು?
ಸಮಾರಂಭದಲ್ಲಿ ಬೆಳಗ್ಗೆ ಮಾತನಾಡಿದ ಶಾಸಕ ಜಮೀರ್ ಅಹಮದ್ ಖಾನ್, ಸಿದ್ದರಾಮಯ್ಯ ಅವರನ್ನ ಮಾಜಿ ಸಿಎಂ ಎಂದು ಕರೆಯಲು ನಾನು ಇಷ್ಟ ಪಡಲ್ಲ ಭಾವಿ ಸಿಎಂ ಎಂದು ಕರೆಯುತ್ತೇನೆ. ರಾಜ್ಯ ಪ್ರವಾಸದ ವೇಳೆಯಲ್ಲೂ ಹಲವು ಜನರು ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಹೇಳಿದ್ದಾರೆ. ನಮ್ಮದು ಹೈಕಮಾಂಡ್ ಇರುವ ಪಕ್ಷ ಆದರು ರಾಜ್ಯದ ಜನ ಒಪ್ಪಿದರೆ ಹೈ ಕಮಾಂಡ್ ಸಹಾ ಒಪ್ಪಬೇಕಾಗುತ್ತೆ ಅನ್ನೋದು ನನ್ನ ಅಭಿಪ್ರಾಯ, ಮಾಧ್ಯಮಗಳು ನನ್ನ ಹೇಳಿಕೆಗಳನ್ನು ದೊಡ್ಡ ಸುದ್ದಿ ಮಾಡಬೇಡಿ ಎಂದರು.
ಹೈಕಮಾಂಡಿಗೆ ಠಕ್ಕರ್
ಸಿದ್ದರಾಮಯ್ಯ ಅವರೇ ಭಾವಿ ಸಿಎಂ ಎಂದು ಪದೇ ಪದೆ ಹೇಳದಂತೆ, ಲೂಸ್ ಟಾಕ್ ಆಡದಂತೆ ಎಚ್ಚರಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತಿಗೆ ಬೆಲೆ ಕೊಡದ ಜಮೀರ್ ಅಹ್ಮದ್ ಇಂದು ಮತ್ತೊಮ್ಮೆ ಡಿಕೆಶಿ ಎಚ್ಚರಿಕೆ ಮೀರಿ ಮತ್ತೆ ಸಿದ್ದರಾಮಯ್ಯ ಬಾವಿ ಸಿಎಂ ಎಂದಿದ್ದಾರೆ. ರಾಜ್ಯದ ಜನ ಒಪ್ಪಿದರೆ ಪಕ್ಷದ ಹೈ ಕಮಾಂಡ್ ಸಹಾ ಒಪ್ಪಬೇಕು ಎನ್ನುವ ಮೂಲಕ ಹೈ ಕಮಾಂಡ್ಗೂ ಜಮೀರ್ ಡಿಚ್ಚಿ ಕೊಟ್ಟಿದ್ದಾರೆ.
ಡಿಕೆಶಿ ಪ್ರತಿಕ್ರಿಯೆ
ಕೆಪಿಸಿಸಿ ಕಚೇರಿಯಲ್ಲಿ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಕಾಂಗ್ರೆಸ್ ಸಂಘಟಿತ ನಾಯಕತ್ವದಲ್ಲಿ ಚುನಾವಣೆ ಎದುರಿಸ್ತೇವೆ. ಯಾರೇ ಲೀಡರ್ಗೂ ಆಸೆ ಆಕಾಂಕ್ಷಿಗಳು ಇರಬಹುದು. ನಮ್ಮ ಡ್ಯೂಟಿ ಚೀಫ್ ಮಿನಿಸ್ಟರ್ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ತರುವುದು. ಯಾರೂ ಹದ್ದು ಮೀರಿ ಹೋಗಬಾರದು ಅಂತ ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್ ಕೂಡ ಹೇಳಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿ ಇದ್ದೀನಿ. ಅದು ಅವರ ವೈಯಕ್ತಿಕ ಅಭಿಪ್ರಾಯ ಹಾಗೂ ಮಾತು ಎಂದಷ್ಟೇ ಹೇಳಿದ್ದಾರೆ.
ಮರಳಿ ಜಮೀರ್ ಠಕ್ಕರ್
ಈ ಹೇಳಿಕೆಗೆ ಚಾಮರಾಜಪೇಟೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಜಮೀರ್ ಅಹ್ಮದ್, ನಮ್ಮದು ಹೈ ಕಮಾಂಡ್ ಪಕ್ಷ. ಸಿಎಂ ಯಾರು ಆಗಬೇಕು ಅನ್ನೋದನ್ನ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ನಾನು ಅಥವಾ ಡಿ.ಕೆ.ಶಿವಕುಮಾರ್ ತೀರ್ಮಾನ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ವೈಯುಕ್ತಿಕ ಹೇಳಿಕೆ. ರಾಜ್ಯದ ಜನರ ಅಭಿಪ್ರಾಯ ನಾನು ಹೇಳಿದ್ದೇನೆ ಅಷ್ಟೆ, ಆದರೆ, ಅಂತಿಮವಾಗಿ ಯಾರು ಸಿಎಂ ಆಗಬೇಕು ಅನ್ನೋದನ್ನ ಹೈ ಕಮಾಂಡ್ ತೀರ್ಮಾನ ಮಾಡುತ್ತೆ.
ಈ ವಿಚಾರದಲ್ಲಿ ನನಗೆ ಯಾಕೆ ನೋಟಿಸ್ ಕೊಡ್ತಾರೆ..? ಈ ಹಿಂದೆಯು ಯಾವ ವಿಚಾರದಲ್ಲೂ ನನಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿಲ್ಲ. ಮೊನ್ನೆ ವಿಜಯನಗರದಲ್ಲಿ, ಜಯನಗರದಲ್ಲಿ ಎಲ್ಲ ಕಡೆ ಸಿಕ್ಕಿದ್ದರು ಎಲ್ಲೂ ಏನು ಹೇಳಲಿಲ್ಲ. ಕುಮಾರಸ್ವಾಮಿ ಹಾಗೂ ನನ್ನ ನಡುವಿನ ಫ್ಲಾಟ್ ವಿಚಾರದಲ್ಲೂ ಡಿ.ಕೆ.ಶಿವಕುಮಾರ್ ನನಗೆ ಏನು ಹೇಳಿಲ್ಲ. ನನ್ನ ಹಾಗೂ ಕುಮಾರಸ್ವಾಮಿ ನಡುವೆ ಫ್ಲಾಟ್ ವಿಚಾರದಲ್ಲಿ ಇದ್ದ ವಿವಾದ ಹಾಗೂ ಗೊಂದಲ ಬಗೆಹರಿದಿದೆ ಎಂದು ತಿಳಿಸಿದ್ದಾರೆ.