ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಬಂಧನಕ್ಕೆೊಳಗಾದ ಮೂವರು ಆರೋಪಿಗಳನ್ನು ಕಳೆದ ಎರಡು ವಾರಗಳಿಂದಲೂ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಆದ್ರೆ ವಿಚಾರಣೆ ವೇಳೆ ಆರೋಪಿಗಳ ಕೃತ್ಯದ ಹಿಂದೆ ಬೇರೆಯವರ ಕೈವಾಡದ ಶಂಕೆಯೂ ವ್ಯಕ್ತವಾಗಿದೆ.
ಈ ಪ್ರಕರಣದ ಮೊದಲ ಆರೋಪಿ ಸಾಗರ್ ತನ್ನ ವಯಕ್ತಿಕ ದ್ವೇಷಕ್ಕೆ ಕೃತ್ಯ ನಡೆಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಈತ ಶಾಸಕ ಸತೀಶ್ ರೆಡ್ಡಿ ಮನೆಯ ಕಾಂಪೌಂಡ್ ಪ್ರವೇಶಿಸಿ ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಇನ್ನಿಬ್ಬರು ಆರೋಪಿಗಳಾದ ನವೀನ್ ಮತ್ತು ಶ್ರೀಧರ್ ಇಬ್ಬರೂ ಕಾಂಪೌಂಡ್ ಹೊರಗಿನಿಂದಲೇ ನವೀನ್‌ಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಗಳು ಹೇಳಿದ್ದಾರೆ.
ಕಾರುಗಳಿಗೆ ಬೆಂಕಿ ಹಚ್ಚುವ ಮುನ್ನ ಆರೋಪಿಗಳು ದಾರಿಯಲ್ಲಿ ಬರುವಾಗ ಬೈಕ್‌ವೊಂದರ ಪೆಟ್ರೋಲ್ ಕದ್ದು ತಂದಿದ್ದರಂತೆ. ಇದೇ ವೇಳೆ, ಪ್ರಕರಣದಲ್ಲಿ ಬೇರೆ ವ್ಯಕ್ತಿಗಳ ಕೈವಾಡದ ಶಂಕೆಯೂ ಇದೆ. ಆದರೆ, ವಿಚಾರಣೆ ವೇಳೆ ಸಾಗರ್ ವೈಯಕ್ತಿಕ ದ್ವೇಷಕ್ಕೆ ಕೃತ್ಯ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ.
'ಸಹಾಯಕ್ಕೆ ಬಾರದ ಶಾಸಕರಿಂದ ಉಪಯೋಗವೇನು?'
ಸಹಾಯಕ್ಕಾಗಿ ಶಾಸಕರ ಮನೆಗೆ ಎರಡು-ಮೂರು ದಿನಗಳ ಕಾಲ ಅಲೆದರೂ ಅವರು ಸ್ಪಂದಿಸಲಿಲ್ಲ. ಇಂತಹ ಎಂಎಲ್ಎಯಿಂದ ಉಪಯೋಗವೇನು? ಎಂಬ ಯೋಚನೆ ಸಾಗರ್ ತಲೆಗೆ ಬಂತಂತೆ. ಈ ಬಗ್ಗೆ ಮತ್ತಿಬ್ಬರು ಆರೋಪಿಗಳಾದ ನವೀನ್ ಮತ್ತು ಶ್ರೀಧರ್ ಬಳಿ ಹೇಳಿಕೊಂಡಿದ್ದ ಆತ, ಹಣ ಇದ್ದವರು ನಮಗೆ ಬೆಂಬಲ ಕೊಡೋದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದನಂತೆ. ಕೃತ್ಯ ಎಸಗಲು ಸ್ನೇಹಿತರ ಬಳಿ ಸಹಾಯವನ್ನೂ ಕೇಳಿದ್ದಾನೆ. ಸಾಗರ್ ಮಾತು ಕೇಳಿರುವ ನವೀನ್ ಮತ್ತು ಶ್ರೀಧರ್ ಬೆಂಕಿ ಹಚ್ಚುವುದಕ್ಕೆ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ: ವಶದಲ್ಲಿರುವ ಶಂಕಿತರಿಗೂ CCTVಯಲ್ಲಿ ಸೆರೆಯಾಗಿರುವವರಿಗೂ ಹೋಲಿಕೆಯೇ ಆಗ್ತಿಲ್ಲ!
ಆರೋಪಿಗಳ ಬಳಿ ಮೊಬೈಲ್ ಇಲ್ಲ:
ಆರೋಪಿಗಳ ಬಳಿ ಮೊಬೈಲ್ ಕೂಡ ಇರಲಿಲ್ಲ ಅನ್ನೋದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರ ಪೈಕಿ ನವೀನ್ ಮಾತ್ರ ಮೊಬೈಲ್ ಬಳಸ್ತಿದ್ದ ಎನ್ನಲಾಗಿದ್ದು, ಆರು ತಿಂಗಳ ಹಿಂದೆ ಆತ ಮೊಬೈಲ್ ಕಳೆದುಕೊಂಡಿದ್ದ. ಸದ್ಯ ನವೀನ್ ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ಈ ಬಗ್ಗೆ ನವೀನ್ ಫೋನ್ ನಂಬರ್‌ನ ಸಿಡಿಆರ್‌ನಲ್ಲಿಯೂ ಉಲ್ಲೇಖಿಸಲಾಗಿದೆ. ಆರು ತಿಂಗಳ ಹಿಂದೆ ಆತ ಯಾರ್ಯಾರಿಗೆ ಫೋನ್ ಕರೆ ಮಾಡಿದ್ದ ಎನ್ನುವುದರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶಾಸಕ ಸತೀಶ್ ರೆಡ್ಡಿ ಅನುಮಾನವೇನು?
ಈ ಘಟನೆಯ ಹಿಂದೆ ರೌಡಿಶೀಟರ್ ಸೋಮನ ಕೈವಾಡ ಇದೆ ಎಂದು ಶಾಸಕ ಸತೀಶ್ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿಂದೆ ಸತೀಶ್ ರೆಡ್ಡಿ ವಿರುದ್ದ ಸೋತಿದ್ದಕ್ಕಾಗಿ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟಿದ್ದ ಎನ್ನಲಾಗಿತ್ತು. ಪೊಲೀಸರು ಸೋಮನನ್ನ ಕರೆದು ವಿಚಾರಣೆ ನಡೆಸೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋಮ ವೈಟ್‌ಫೀಲ್ಡ್ ವಿಭಾಗದಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣದಲ್ಲೂ ಬೇಕಾಗಿದ್ದು, ಪತ್ತೆ ಮಾಡಿ ಆತನನ್ನೂ ವಿಚಾರಣೆ ನಡೆಸೋಕೆ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಸದ್ಯ ವಿಚಾರಣೆ ವೇಳೆ ಆರೋಪಿಗಳ ಹೇಳಿಕೆ ಗಮನಿಸಿದರೆ ಈ ಘಟನೆ ಹಿಂದೆ ಬೇರೆಯವರ ಕೈವಾಡ ಇರೋದು ಡೌಟ್ ಅನ್ನೋದು ಸದ್ಯಕ್ಕಿರುವ ಮಾಹಿತಿ. ಆದ್ರೆ ಒಮ್ಮೆ ರೌಡಿಶೀಟರ್ ಸೋಮನನ್ನೂ ಪೊಲೀಸರು ವಿಚಾರಣೆ ನಡೆಸಿದ್ರೆ ಮುಂದಿನ ಬೆಳವಣಿಗೆ ಏನು ಎಂಬುದು ತಿಳಿಯುತ್ತದೆ.