ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಅನ್ಲಾಕ್ 2.0 ಜಾರಿಯಲ್ಲಿದೆ. ಅಲ್ಲದೆ ಈ ಅವಧಿಯನ್ನು ಕೋವಿಡ್ ಎರಡನೇ ಅಲೆಯ ಅಂತಿಮ ಘಟ್ಟ ಎನ್ನಲಾಗುತ್ತಿದೆ. ಆದರೆ, 2ನೇ ಅಲೆ ಸಂಪೂರ್ಣವಾಗಿ ಅಂತ್ಯಗೊಳ್ಳುವುದು ಯಾವಾಗ ಎಂಬ ನಿರೀಕ್ಷೆಗೆ ತಜ್ಞರು ಈಟಿವಿ ಭಾರತ್ಗೆ ವಿವರಣೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಂಜುನಾಥ್, ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಬರುತ್ತಿದೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಬಂದರೆ, ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗಬೇಕು. ಜೊತೆಗೆ ಮರಣ ಪ್ರಮಾಣವೂ ಶೇ. 1ಕ್ಕಿಂತ ಕಡಿಮೆ ಆಗಬೇಕು. ಹೊಸ ಕ್ಲಸ್ಟರ್ (ಹೊಸ ಪ್ರಕರಣಗಳು) ಪತ್ತೆಯಾಗದೆ ಎರಡು ಮೂರು ವಾರಗಳು ಮುಂದುವರಿದರೆ 2ನೇ ಅಲೆಯ ಮುಕ್ತಾಯ ಎಂದು ಹೇಳಬಹುದು ಎಂದರು. ಆದರೂ ಡಿಸೆಂಬರ್ವರೆಗೂ ಜನರು ಸಭೆ-ಸಮಾರಂಭಗಳಲ್ಲಿ ಭಾಗವಹಿಸದೆ,ಗುಂಪುಗಳಲ್ಲಿ ಸೇರದೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.
ಜೂನ್ 23ರ ರಾಜ್ಯ ಸರ್ಕಾರದ ವಾರ್ ರೂಂ ವರದಿಯ ಪ್ರಕಾರ, ಈ ಕೆಳಗಿನ ಜಿಲ್ಲೆಗಳಲ್ಲಿ ಕಳೆದ ಏಳು ದಿನದ ಪಾಸಿಟಿವಿಟಿ ಪ್ರಮಾಣ ಹಾಗೂ ಮರಣ ಪ್ರಮಾಣ ವಿವರ ಕೆಳಗಿನಂತಿದೆ.
ಜಿಲ್ಲೆ | ಪಾಸಿಟಿವಿಟಿ (ಶೇಕಡಾವಾರು) |
ಮೈಸೂರು | 8.66 |
ಕೊಡಗು | 8.47 |
ದಕ್ಷಿಣ ಕನ್ನಡ | 7.17 |
ಹಾಸನ | 6.05 |
ದಾವಣಗೆರೆ | 5.41 |
ಚಿಕ್ಕಮಗಳೂರು | 5.14 |
ಚಾಮರಾಜನಗರ | 5.05 |
ಬೆಂಗಳೂರು | 1.72 |
ಜಿಲ್ಲೆ | ಮರಣ (ಶೇಕಡಾವಾರು) |
ಹಾವೇರಿ | 14.79 |
ಧಾರವಾಡ | 12.55 |
ಬಳ್ಳಾರಿ | 10.45 |
ರಾಯಚೂರು | 8.20 |
ದಾವಣಗೆರೆ | 6.05 |
ಬಾಗಲಕೋಟೆ | 5.62 |
ಕೋಲಾರ | 5.36 |
ಕೊಪ್ಪಳ | 4.46 |
ವಿಜಯಪುರ | 4.26 |
ಬೀದರ್ | 4.26 |
ರಾಮನಗರ | 3.31 |
ಮೈಸೂರು | 3.30 |
ಬೆಂಗಳೂರು ನಗರ | 2.30 |
ಉಳಿದ ಜಿಲ್ಲೆಗಳಲ್ಲಿ ಶೇ.3ಕ್ಕಿಂತ ಕಡಿಮೆ ಮರಣ ಪ್ರಮಾಣ ಇದೆ. ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಕೆಲವು ವಲಯ ಹಾಗೂ ವಾರ್ಡ್‌ಗಳಲ್ಲಿ ಪ್ರಕರಣ ಹೆಚ್ಚಿವೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಿ.ರಂದೀಪ್, ವಿದೇಶಗಳಲ್ಲಿಯೂ ಮೂರನೇ ಅಲೆ, ನಾಲ್ಕನೇ ಅಲೆ ಬಂದಿವೆ.
ಸಾಮಾನ್ಯವಾಗಿ ಪಾಸಿಟಿವಿಟಿ ಪ್ರಮಾಣ ಹಾಗೂ ಎಷ್ಟು ಸೋಂಕು ಪರೀಕ್ಷೆ ನಡೆಸಲಾಗುತ್ತದೆ. ಅದರ ಒಂದು ಪರ್ಸೆಂಟ್ ಪಾಸಿಟಿವಿಟಿ ಪ್ರಮಾಣ ಬಂದರೆ ಖಂಡಿತವಾಗಿ ಅದನ್ನು 2ನೇ ಅಲೆಯ ನಿಯಂತ್ರಣ ಎಂದು ಹೇಳಬಹುದು. ಜೊತೆಗೆ ಹೆಚ್ಚು ಜನ ಇರುವ ಕಡೆ ಹೆಚ್ಚು ಟೆಸ್ಟಿಂಗ್ ಮಾಡಬೇಕಾಗುತ್ತದೆ ಎಂದರು.
ಸದ್ಯ ನಗರದಲ್ಲಿ 800 ಕೇಸ್ ಬಂದರೆ ಒಂದೊಂದು ಬಾರಿ ಸಾವಿರ ಮೇಲ್ಪಟ್ಟು ಬರುತ್ತಿವೆ. ಹೀಗಾಗಿ, ಮುಗಿದಿದೆ ಎಂದು ಹೇಳಲು ಸಾಧ್ಯವಿಲ್ಲ. ಮಹದೇವಪುರ, ಪೂರ್ವ ವಲಯದಲ್ಲಿ ಹೆಚ್ಚು ಪ್ರಕರಣ ಇದೆ. ಒಂದಷ್ಟು ವಾರ, ತಿಂಗಳುಗಳ ಕಾಲ ನಗರದಲ್ಲಿ ಕೇವಲ 200 ಪಾಸಿಟಿವ್ ಪ್ರಕರಣಕ್ಕೆ ಇಳಿಕೆಯಾದರೆ ನಿಯಂತ್ರಣದಲ್ಲಿದೆ ಎನ್ನಬಹುದು ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಒಂದೇ ಕಡೆ ಐದಕ್ಕಿಂತ ಹೆಚ್ಚು ಪ್ರಕಣಗಳು ಕಂಡು ಬಂದಲ್ಲಿ ಹೆಚ್ಚಿನ ಒತ್ತು ಕೊಟ್ಟು ಕಂಟೇನ್ಮೆಂಟ್ ಮಾಡಲಾಗ್ತಿದೆ. ಅಲ್ಲದೆ ಪಾಸಿಟಿವ್ ಇರುವವರು ಓಡಾಟ ನಡೆಸಿದರೆ ಗೊತ್ತಾಗುವಂತೆ ಪ್ರತಿಯೊಬ್ಬರ ಫೋನ್ಗೂ ಕ್ವಾರಂಟೈನ್ ವಾಚ್ ಆ್ಯಪ್ ಅಳವಡಿಸಲಾಗುತ್ತಿದೆ. ಅಕ್ಕಪಕ್ಕದ ಮನೆಯವರೂ ಮಾಹಿತಿ ಕೊಡಬಹುದಾಗಿದೆ ಎಂದರು.
ಇನ್ನೊಂದೆಡೆ ಹೊಸ ರೂಪಾಂತರಿ ತಳಿ ಡೆಲ್ಟಾ ಪ್ಲಸ್ ಕೂಡ ಕಂಡು ಬಂದಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಜೀನೋಮ್ ಸ್ವೀಕ್ವೆನ್ಸ್ ಮಾಡಲಾಗ್ತಿದೆ. ಸದ್ಯ ಐದು ಕೋವಿಡ್ ಪಾಸಿಟಿವ್ ಸೋಂಕಿತರ ಸ್ಯಾಂಪಲ್ ಕಳಿಸಲಾಗಿದೆ ಎಂದು ಡಿ. ರಂದೀಪ್ ತಿಳಿಸಿದರು.
ಬೆಂಗಳೂರು ನಗರದಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ 10 ವಾರ್ಡ್ಗಳು :
ವಾರ್ಡ್- 184 | ಶೇ. 3.99 |
ವಾರ್ಡ್ -54 | ಶೇ.3.76 |
ವಾರ್ಡ್ -52 | ಶೇ.3.76 |
ವಾರ್ಡ್- 53 | ಶೇ.3.76 |
ವಾರ್ಡ್- 55 | ಶೇ.3.76 |
ವಾರ್ಡ್- 114 | ಶೇ.33 |
ವಾರ್ಡ್-115 | ಶೇ.33 |
ವಾರ್ಡ್-30 | ಶೇ 3.20 |
ವಾರ್ಡ್ -26 | ಶೇ 3.13 |
ವಾರ್ಡ್-94 | ಶೇ 3.03 |
ನಗರದ ಎಲ್ಲಾ ವಾರ್ಡ್ಗಳಲ್ಲೂ ಶೇ.1 ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವ್ ಪ್ರಕರಣಕ್ಕೆ ಇಳಿಕೆಯಾದರೆ, ಎರಡನೇ ಅಲೆಯ ಅಂತಿಮಘಟ್ಟ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಓದಿ: ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ