ಬೆಂಗಳೂರು: ತ್ರಿಶಂಕು ಸ್ಥಿತಿಯಲ್ಲಿರುವ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ನಾಯಕರಿಗೆ ಸರ್ಕಾರವನ್ನು ಉಳಿಸುವುದು ಸುಲಭದ ಮಾತಲ್ಲ. ಹೇಗಾದರೂ ಮಾಡಿ ತಮ್ಮ ಮಗನ ನೇತೃತ್ವದ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೊಸ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ವಿಪ್ ಮೇಲಿನ ಶಾಸಕಾಂಗ ಪಕ್ಷದ ನಾಯಕನ ಅಧಿಕಾರ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಸ್ಪಷ್ಟವಾಗಿಲ್ಲ. ಹೀಗಾಗಿ ಮೈತ್ರಿ ನಾಯಕರು ಈ ಕುರಿತು ಸ್ಪಷ್ಟ ವಿವರಣೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿನ್ನೆ ಬೆಳಗ್ಗೆಯೇ ಮುಂದಾಗಿದ್ದರು. ಅಸಲಿಗೆ ಶುಕ್ರವಾರ ಅರ್ಜಿ ಸಲ್ಲಿಸಿ ನ್ಯಾಯಾಲಯ ಅಂದೇ ತೀರ್ಪು ನೀಡಿದರೆ, ಅಕಸ್ಮಾತ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದರೆ, ಕುಮಾರಸ್ವಾಮಿ ಸರ್ಕಾರ ಬೀಳಬಹುದೆಂಬ ಲೆಕ್ಕಾಚಾರ ಹಾಕಿದ ದೇವೇಗೌಡರು, ಅರ್ಜಿ ಹಾಕಲು ಸಿದ್ದತೆ ನಡೆಸಿದ್ದ ಸಿಎಂ ಪರ ವಕೀಲರನ್ನು ನಿನ್ನೆ ತಡೆದಿದ್ದರು.
ಅಲ್ಲದೆ ಶುಕ್ರವಾರದ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಿದ ನಂತರ ಸಂಜೆ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡಿದಲ್ಲಿ ಮೈತ್ರಿ ಸರ್ಕಾರಕ್ಕೆ ಎರಡು ದಿನದ ಕಾಲಾವಕಾಶ ಸಿಗುತ್ತದೆ. ಈ ಸಮಯದಲ್ಲಿ ಅತೃಪ್ತರ ಮನವೊಲಿಸಬಹುದು ಅಥವಾ ಸೋಮವಾರದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿದರೆ ಸರ್ಕಾರಕ್ಕೆ ಜೀವದಾನ ಸಿಗುವ ಸಾಧ್ಯತೆ ಇದೆ ಎಂಬುದು ಗೌಡರ ಯೋಜನೆಯಾಗಿದೆ.
ಸಿಎಂ ಕುಮಾರಸ್ವಾಮಿ ಅವರಿಗೆ ಮಂಗಳವಾರದ ನಂತರ ಯಾವುದೇ ತೊಂದರೆ ಇಲ್ಲ ಎಂಬುದನ್ನು ಜ್ಯೋತಿಷಿಗಳು ಹೇಳಿರುವ ಹಿನ್ನೆಲೆಯಲ್ಲಿ, ದೇವೇಗೌಡರು ಇಂತಹ ಯೋಜನೆ ರೂಪಿಸಿದ್ದಾರೆ. ಇನ್ನು ಸೋಮವಾರ ಸುಪ್ರೀಂಕೋರ್ಟ್ ನಲ್ಲೂ ಸರ್ಕಾರದ ಪರ ತೀರ್ಪು ಬಂದರೆ ದೊಡ್ಡಗೌಡರ ಪ್ಲಾನ್ ಸಕ್ಸಸ್ ಆಗುತ್ತದೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಈಗಾಗಲೇ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ್ದು, ಚರ್ಚೆಯೂ ಪ್ರಾರಂಭವಾಗಿದೆ. ಈ ಹಂತದಲ್ಲಿ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ಅನ್ವಯವಾಗುವ ಕುರಿತಂತೆ ಇರುವ ಗೊಂದಲವನ್ನು ಬಗೆಹರಿಸಿಕೊಳ್ಳಲು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ. ಅಲ್ಲದೆ, ವಿಶ್ವಾಸಮತ ಯಾಚನೆಯ ನಿರ್ಣಯದ ಮೇಲಿನ ಚರ್ಚೆ ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಗಡುವು ನೀಡಿರುವ ವಿಚಾರ ಕುರಿತಂತೆಯೂ ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಎರಡೂ ವಿಚಾರಗಳಲ್ಲಿ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಮುಂದೆ ಪರ್ಯಾಯ ಆಯ್ಕೆಗಳಿಲ್ಲ. ಒಂದು ವೇಳೆ ಸೋಮವಾರದೊಳಗೆ ಅತೃಪ್ತ ಶಾಸಕರು ಮರಳಿ ಬಂದರೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಬಲ ಸಿಗಲಿದೆ. ಇಲ್ಲದಿದ್ದರೆ ಸರ್ಕಾರ ಉಳಿಸಿಕೊಳ್ಳುವುದು ಕಷ್ಟ.
ಸುಪ್ರೀಂಕೋರ್ಟ್ನಲ್ಲಿ ಜೆಡಿಎಸ್ ಪರವಾಗಿ ತೀರ್ಪು ಬಂದರೆ ವಿಶ್ವಾಸಮತ ಯಾಚನೆಯ ನಿರ್ಣಯದ ಮೇಲಿನ ಚರ್ಚೆಯನ್ನು ಮತ್ತಷ್ಟು ಮುಂದುವರಿಸುವ ಸಾಧ್ಯತೆಯ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಒಂದು ವೇಳೆ ಪಕ್ಷಕ್ಕೆ ವ್ಯತಿರಿಕ್ತ ತೀರ್ಪು ನ್ಯಾಯಾಲಯದಿಂದ ದೊರೆತರೆ ಬಹುತೇಕ ಸೋಮವಾರವೇ ವಿಶ್ವಾಸಮತದ ಯಾಚನೆ ಮೇಲಿನ ನಿರ್ಣಯದ ಚರ್ಚೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಹಾಗಾಗಿ, ಮೈತ್ರಿ ನಾಯಕರ ಚಿತ್ತ ಸುಪ್ರೀಂಕೋರ್ಟ್ ನತ್ತ ಹರಿದಿದೆ.