ಬೆಂಗಳೂರು: ಸೌರಶಕ್ತಿ ಬಳಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು 'ಸೌರ ನೀತಿ 2014-21' ನ್ನು ಜಾರಿಗೊಳಿಸಿದ್ದು, ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡುತ್ತಿದೆ.
ಕರ್ನಾಟಕ ಕೈಗಾರಿಕಾ ನೀತಿಯಡಿ ಸಿಗುವ ಎಲ್ಲ ವಿನಾಯಿತಿಗಳನ್ನು ಸೌರ ಯೋಜನೆ ಅಭಿವೃದ್ಧಿದಾರರು ಪಡೆಯಲು ಅವಕಾಶವಿದೆ. ಸಾಲದ ಪತ್ರಗಳ ಮತ್ತು ಕೈಗಾರಿಕಾ ನಿವೇಶನ ಮತ್ತು ಮಳಿಗೆ ಖರೀದಿ ಪತ್ರಗಳ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕಗಳಿಂದ ವಿನಾಯಿತಿ ನೀಡಲಾಗಿದೆ.
ಸೌರ ಯೋಜನೆಗಳನ್ನು ಸ್ಥಾಪಿಸಲು ಭೂ ಸುಧಾರಣೆ ಕಾಯ್ದೆ 109 ರನ್ವಯ ಅನುಮತಿ ಹೊಂದಿದ ಭೂಮಿಗೆ ಪರಿಭಾವಿತ ಭೂ - ಪರಿವರ್ತನೆ ಸೌಲಭ್ಯ ಒದಗಿಸಲಾಗುತ್ತಿದೆ. ಸೌರ ವಿದ್ಯುತ್ ಘಟಕಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.
ಸೌರ ನೀತಿಯಲ್ಲಿ ಕೆಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
1. ಸ್ಪರ್ಧಾತ್ಮಕ ಬಿಡ್ ಮುಖೇನ (ಸೌರ ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆ (ಆರ್.ಪಿ.ಒ)
2. ಸ್ವತಂತ್ರ ವಿದ್ಯುತ್ ಉತ್ಪಾದಕರ ವರ್ಗ (ಸ್ವಂತ ಬಳಕೆ ಮತ್ತು ಮೂರನೇ ವ್ಯಕ್ತಿ ಮಾರಾಟ)
3. ಸೋಲಾರ್ ಪಾರ್ಕ್
ಇನ್ನು ಸೌರ ನೀತಿಯಲ್ಲಿ ನಿಗದಿಪಡಿಸಿದ ಸೌರ ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆ (ಆರ್.ಪಿ.ಒ) ಗುರಿಯನ್ನು ನಿಗದಿತ ಅವಧಿಯೊಳಗೆ ತಲುಪಲಾಗಿದೆ. ರಾಜ್ಯದಲ್ಲಿ ಈವರೆಗೆ 7089.16 ಮೆ.ವ್ಯಾ ಸಾಮರ್ಥ್ಯದ ಗ್ರಿಡ್ ಆಧಾರಿತ ಸೌರ ಘಟಕಗಳು ಅನುಷ್ಠಾನಗೊಂಡಿವೆ.
ಸೌರ ಪಂಪ್‌ಸೆಟ್‌ಗಳ ಅಳವಡಿಕೆ : ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್ ಅಳವಡಿಸುವ ಯೋಜನೆಯನ್ನು 2014-15 ರಿಂದಲೇ ಜಾರಿಗೊಳಿಸಿದೆ. ಎಂಎನ್ಆರ್ಇ (ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ) ರವರ ಸಹಾಯಧನ, ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಂದ ಪ್ರತಿ ಪಂಪ್ ಸೆಂಟ್‌ಗೆ 1 ಲಕ್ಷ ರೂ. ವಂತಿಗೆಯೊಂದಿಗೆ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವರ್ಗದವರಿಗೆ ಉಚಿತವಾಗಿ ರಾಜ್ಯದಲ್ಲಿ 3,710 ರೈತ ಫಲಾನುಭವಿಗಳ ಜಮೀನಿನ ಕೊಳವೆ ಬಾವಿಗಳಿಗೆ 5 ಹೆಚ್ ಪಿ ಸಾಮರ್ಥ್ಯದ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿರುತ್ತದೆ.
ಇದರಲ್ಲಿ ಸಾಮಾನ್ಯ ವರ್ಗ 3009, ಪರಿಶಿಷ್ಟ ಜಾತಿ 487, ಪರಿಶಿಷ್ಟ ಪಂಗಡದ 214 ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್ ಸೆಟ್ ಅಳವಡಿಸಲಾಗಿದೆ. ಸೌರ ಛಾವಣಿ ಯೋಜನೆಗಳು ವಿದ್ಯುತ್ ಸರಬರಾಜು ಕಂಪನಿಗಳಿಂದ ಅನುಷ್ಠಾನಗೊಳಿಸಲಾಗಿದ್ದು, ಈವರೆಗೆ 263 ಮೆ.ವ್ಯಾ. ಸಾಮರ್ಥ್ಯದಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಸರ್ಕಾರ ಪ್ರತಿ ತಿಂಗಳು ಉತ್ಪಾದಿಸುತ್ತಿರುವ ಸೌರ ವಿದ್ಯುತ್ 1,16,31.311 ದಶಲಕ್ಷ ಯೂನಿಟ್ಗಳಷ್ಟು ವಿದ್ಯುತ್ ಲಭ್ಯವಿದೆ. ಇದರಲ್ಲಿ ಸರ್ಕಾರ ಬಳಸಿಕೊಳ್ಳುತ್ತಿರುವ ಹಾಗೂ ಮಾರಾಟ ಮಾಡುತ್ತಿರುವ ವಿದ್ಯುತ್ ನ ಪ್ರಮಾಣ 1,1078.995 ದಶಲಕ್ಷ ಯೂನಿಟ್ಗಳಷ್ಟು ಸೌರ ವಿದ್ಯುತ್ ಬಳಸಲಾಗುತ್ತಿದ್ದು, 552.316 ದಶಲಕ್ಷ ಯೂನಿಟ್ಗಳಷ್ಟು ಸೌರ ವಿದ್ಯುತ್ನ್ನು ಮಾರಾಟ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.