ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಚದುರಿದ ರೀತಿಯಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಒಳನಾಡಿನಲ್ಲಿ ದುರ್ಬಲವಾಗಿದ್ದು, ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದೆ ಎಂದು ಹೇಳಿದೆ.
ಕರ್ನಾಟಕದ ಮಂಗಳೂರು, ಉತ್ತರ ಕನ್ನಡ, ಉಡುಪಿ, ಕಾರವಾರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ. ಹಲವೆಡೆ ಸೆಪ್ಟೆಂಬರ್ 26ರವರೆಗೂ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ : ಕರ್ನಾಟಕದ ಕರಾವಳಿಯ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ನಗರದ ಕೆಲವು ಕಡೆಗಳಲ್ಲಿ ಒಂದೆರೆಡು ಬಾರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ : ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಸ್ಕಾರ್ಪಿಯೋ ಕಾರು - ವಿಡಿಯೋ